ಬಾಗಲಕೋಟೆ:ಕಾಂಗ್ರೆಸ್ನವರು ಆಲಿಬಾಬಾ ಚಾಲೀಸ್ ಫರ್ ಚಾರ್ ಚೋರ್ಗಳಿದ್ದಂತೆ. ಅಧಿವೇಶನದಲ್ಲಿ ನಡೆಯಬೇಕಿದ್ದ ಚರ್ಚೆಗಳನ್ನು ಮೊಟಕುಗೊಳಿಸಿ, ಸ್ವಾರ್ಥ ರಾಜಕಾರಣಕ್ಕಾಗಿ ಸದನವನ್ನೇ ಸಂಪೂರ್ಣ ದಿಕ್ಕು ತಪ್ಪಿಸುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು ಹರಿಹಾಯ್ದಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದನ ನಡೆದರೆ ರಾಜ್ಯದಲ್ಲಿರುವ ಗಂಭೀರ ವಿಷಯಗಳು ಚರ್ಚೆ ಆಗುತ್ತವೆ. ಆದರೆ ಕಾಂಗ್ರೆಸ್ನವರು ರಾಜಕೀಯ ಅಜೆಂಡಾ ಇಟ್ಟುಕೊಂಡು, ಸ್ವಾರ್ಥ ರಾಜಕಾರಣಕ್ಕಾಗಿ ಸದನವನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ತಮ್ಮ ಅವಧಿಯಲ್ಲಿ ಕಾಂಗ್ರೆಸ್ನವರು ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಆದರೀಗ ಭ್ರಷ್ಟಾಚಾರದಲ್ಲಿ ಬಹಳಷ್ಟು ಮಡಿವಂತಿಕೆ ತೋರುತ್ತಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಶಿಕ್ಷಕಿಯರಿಗೆ ಇಳಕಲ್ ಸೀರೆ ಹಂಚಿದ ವಿಚಾರವಾಗಿ ಮಾತನಾಡಿದ ಅವರು, ನಾನು ಏಳು ಚುನಾವಣೆಯಲ್ಲಿ ಆರು ಸಲ ಗೆದ್ದಿರುವುದು ಜನರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದ. ಬಹುಶಃ ನಾನು ಮತ್ತೆ ಬಾದಾಮಿಗೆ ಬಂದರೂ ಬರಬಹುದೇನೋ, ಇಲ್ಲೇ ಚುನಾವಣೆಗೆ ನಿಲ್ಲಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ನನಗೆ ಓದಿಸಿದ, ಸಹಾಯ ಮಾಡಿದ ಗುರುಗಳಿಗೆ ಏನಾದರೂ ಕಾಣಿಕೆ ಕೊಡಬೇಕು ಅಂದುಕೊಂಡಿದ್ದೇನೆ. ಚುನಾವಣೆ ಲಾಭ ಮಾಡಿಕೊಳ್ಳಲು ಅಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಬಾದಾಮಿಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. 2018ರಲ್ಲಿ ಬಾದಾಮಿ, ಮೊಳಕಾಲ್ಮೂರಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಪಾರ್ಟಿ ಅವಕಾಶ ಮಾಡಿಕೊಟ್ಟರೆ ಖಂಡಿತ ಬಾದಾಮಿಯಿಂದ ಸ್ಪರ್ಧೆ ಮಾಡುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಗೆ ಜನಾರ್ದನ ರೆಡ್ಡಿ ಸ್ಪರ್ಧಿಸುವ ಕುರಿತು ಸದ್ಯಕ್ಕೆ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆ ಕುರಿತು ಪಕ್ಷ ತೀರ್ಮಾನಿಸುತ್ತದೆ. ಇದರಲ್ಲಿ ನನ್ನ ಒತ್ತಡ ಏನೂ ಇಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ, ಅದರ ನೈತಿಕ ಅಧಪತನವೇ ಪಕ್ಷದ ಸೋಲಿಗೆ ಕಾರಣ : ಸಿಎಂ