ಬಾಗಲಕೋಟೆ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೊನಾ ವೇಳೆ 40 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಸ್ವಪಕ್ಷದ ವಿರುದ್ಧವೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕೋಟಾ ಶ್ರೀನಿವಾಸ್ ಪೂಜಾರಿ ಈ ಮೂವರು ಉತ್ತರ ಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಬಾಗಲಕೋಟೆ ನಗರದ ಕಾಂಗ್ರೆಸ್ ಪಕ್ಷದ ಕಚೇರಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಪ್ರತಿಪಕ್ಷದಲ್ಲಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 40 ಸಾವಿರ ಕೋಟಿ ಹಗರಣದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಬಿ.ವೈ.ವಿಜಯೇಂದ್ರ, ಆರ್. ಅಶೋಕ್, ಕೋಟಾ ಶ್ರೀನಿವಾಸ್ ಪೂಜಾರಿ ಉತ್ತರಿಸಬೇಕು. ಏಕೆಂದರೆ ಇದು ಕಾಂಗ್ರೆಸ್ ಆರೋಪ ಅಲ್ಲ. ಒಬ್ಬ ಹಿರಿಯ, ಮಾಜಿ ಕೇಂದ್ರ ಸಚಿವ, ಹಾಲಿ ಬಿಜೆಪಿ ಶಾಸಕರು ಕೊಟ್ಟ ಹೇಳಿಕೆ. ಯತ್ನಾಳ್ ಅವರು ಕನ್ನಡಿಗರ ಹಿತಾಸಕ್ತಿ ಕಾಪಾಡಲು ತಮ್ಮ ಬಳಿ ಏನೇ ದಾಖಲೆಗಳಿದ್ದರೂ ಬಿಡುಗಡೆ ಮಾಡಲಿ. ದಾಖಲೆಗಳ ಬಿಡುಗಡೆಗೆ ಮುಜುಗರ ಅನ್ನಿಸಿದರೆ, ನಮ್ಮ ಸರ್ಕಾರದಲ್ಲಿ ಜಸ್ಟೀಸ್ ಮೈಕಲ್ ಸಮಿತಿ ರಚನೆ ಮಾಡಿದ್ದೇವೆ. ಆ ಸಮಿತಿಗಾದರೂ ಕೊಡಲಿ ಎಂದರು.
ಕಾಂಗ್ರೆಸ್ನವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿಲ್ಲ, ಇನ್ನು ಪಿಎಂ ಮಾಡ್ತಾರಾ ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ, ಮೊದಲು ಈಶ್ವರಪ್ಪನವರು ತಮ್ಮ ಮಗನಿಗೆ ಟಿಕೆಟ್ ತೆಗೆದುಕೊಳ್ಳುವುದಕ್ಕೆ ಹೇಳಿ, ಆಮೇಲೆ ಮುಂದಿನದು. ಅವರಿಗೆ (ಈಶ್ವರಪ್ಪ) ಅಡ್ರೆಸ್ ಇಲ್ಲ, ಇನ್ನು ಖರ್ಗೆ ಸಾಹೇಬ್ರಿಗೆ ಅಡ್ರೆಸ್ ಕೊಡ್ತಾರಂತಾ? ಎಂದು ತಿರುಗೇಟು ನೀಡಿದರು.