ಕರ್ನಾಟಕ

karnataka

ETV Bharat / state

ಉಕ್ರೇನ್​ನಲ್ಲಿ ಸಿಲುಕಿದ ಬಾಗಲಕೋಟೆಯ ವಿದ್ಯಾರ್ಥಿನಿಗೆ ಧೈರ್ಯ ಹೇಳಿದ ಸಚಿವ ನಿರಾಣಿ

ಉಕ್ರೇನ್ ದೇಶದಲ್ಲಿ ಸಿಲುಕಿರುವ ಬಾಗಲಕೋಟೆಯ ಬೀಳಗಿ ತಾಲೂಕಿನ ವಿದ್ಯಾರ್ಥಿನಿಗೆ ಸಚಿವ ಮುರುಗೇಶ್ ನಿರಾಣಿ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದರು. ಉಕ್ರೇನಿಗೆ ವೈದ್ಯಕೀಯ ಅಧ್ಯಯನಕ್ಕೆ ತೆರಳಿದ್ದ ಸಹನಾ ಅವರ ಮನೆಗೆ ತೆರಳಿದ ಅವರು ಮನೆಯ ಸದಸ್ಯರಿಗೂ, ವಿದ್ಯಾರ್ಥಿನಿಗೆ ಆತ್ಮಸ್ಥೈರ್ಯ ತುಂಬಿದರು. ಕೇಂದ್ರ, ರಾಜ್ಯ ಸರ್ಕಾರಗಳು ಉಕ್ರೇನ್​ನಿಂದ ಭಾರತೀಯರನ್ನು ಕರೆತರಲು ಸರ್ವಪ್ರಯತ್ನ ನಡೆಸುತ್ತಿವೆ ಎಂದು ಅಭಯ ನೀಡಿದರು.

minister-spoke-with-student-from-karnataka-who-stuck-in-ukraine
ಉಕ್ರೇನ್ ದೇಶದಲ್ಲಿ ಸಿಲುಕಿದ ವಿದ್ಯಾರ್ಥಿನಿಗೆ ಧೈರ್ಯ ಹೇಳಿದ ಸಚಿವರು

By

Published : Mar 2, 2022, 11:50 AM IST

ಬಾಗಲಕೋಟೆ : ಉಕ್ರೇನ್ ದೇಶದಲ್ಲಿ ಅಧ್ಯಯನಕ್ಕೆ ಹೋಗಿ ಸಿಲುಕಿರುವ ವಿದ್ಯಾರ್ಥಿನಿಗೆ ಸಚಿವ ಮುರಗೇಶ ನಿರಾಣಿ ಅವರು ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದರು. ಜಿಲ್ಲೆಯ ಬೀಳಗಿ ತಾಲೂಕಿನ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್‍ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ದೂರವಾಣಿ ವಿಡಿಯೋ ಕರೆ ಮಾಡಿ ಧೈರ್ಯಗೆಡದಂತೆ ಆತ್ಮಸ್ಥೈರ್ಯ ತುಂಬಿದರು. ಬೀಳಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುನಗ ಗ್ರಾಮದಲ್ಲಿರುವ ಸಹನಾ ಪಾಲಕರ ಮನೆಗೆ ಸಚಿವರು ಭೇಟಿ ನೀಡಿದರು.

ಪಶು ಚಿಕಿತ್ಸಾಲಯದ ಸಹಾಯಕ ನಿರ್ದೇಶಕಾಗಿರುವ ಮಲ್ಲನಗೌಡ ಪಾಟೀಲ್ ಅವರ ಪುತ್ರಿ ಸಹನಾ ಎಂಬುವವರು ವೈದ್ಯಕೀಯ ಅಧ್ಯಯನಕ್ಕೆ ಉಕ್ರೇನ್ ಹೋಗಿದ್ದರು. ಉಕ್ರೇನ್‍ನ ಕಾರ್ಖೀವ್ ನಗರದಲ್ಲಿರುವ ವೈದ್ಯಕೀಯ ವಿದ್ಯಾರ್ಥಿನಿ ಸಹನಾ ಪಾಟೀಲ್ ಅವರ ಜೊತೆ ಕೆಲ ನಿಮಿಷಗಳ ಕಾಲ ವಿಡಿಯೋ ಕಾಲ್ ಮಾಡಿ ಸಚಿವರು ಮಾತನಾಡಿದರು. ಅಲ್ಲಿನ ಪರಿಸ್ಥಿತಿ ತಿಳಿದುಕೊಂಡು, ಭಯಭೀತರಾಗದಂತೆ ಸಮಾಧಾನ ಹೇಳಿದರು.

ಕಾರ್ಖೀವ್​ನ ನ್ಯಾಷನಲ್ ಕಾರ್ಖೀವ್​ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿರುವ ಸಹನಾ ಪಾಟೀಲ್, ಯುದ್ಧದ ಕಾರಣ ತಾಯ್ನಾಡಿಗೆ ಮರಳದೆ ಪರದಾಡುತ್ತಿದ್ದಾರೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ವಿದ್ಯಾರ್ಥಿನಿಯ ಪೋಷಕರನ್ನು ಭೇಟಿ ಮಾಡಿದ ಸಚಿವರು, ಆಕೆಯ ಜೊತೆಗೆ ಪಾಲಕರಿಗೂ ಎದೆಗುಂದದಂತೆ ಧೈರ್ಯ ತುಂಬಿದರು. ಆದಷ್ಟು ಶೀಘ್ರ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿದರು.

ಯುದ್ಧ ಪೀಡಿತ ನಗರದಲ್ಲಿ ನೀರು, ಆಹಾರ, ರಕ್ಷಣೆ ಇತರೆ ಮೂಲಭೂತ ಸೌಕರ್ಯಗಳ ಲಭ್ಯತೆ ಕುರಿತು ಮಾಹಿತಿ ಪಡೆದ ಸಚಿವರು, ಅವಕಾಶ ಸಿಕ್ಕಾಗ ಸಾಧ್ಯವಾದಷ್ಟು ಹೆಚ್ಚು ನೀರು ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು. ಯಾವುದೇ ಸಮಯಲ್ಲಾದರೂ ಕೂಡ ತಮ್ಮದೂರವಾಣಿ ಸಂಖ್ಯೆಗೆ ಕರೆ ಮಾಡಲು ತಿಳಿಸಿದರು. ಉಕ್ರೇನ್‍ನಿಂದ ಬರುವವರಿಗೆ ಉಚಿತವಾಗಿ ವಿಮಾನ ಪ್ರಯಾಣ, ವಿಮಾನ ನಿಲ್ದಾಣದಿಂದ ಮನೆಯವರೆಗೂ ತಲುಪಿಸಲು ನಮ್ಮ ಸರ್ಕಾರ ಉಚಿತವಾಗಿ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿದೆ. ಹೇಗಾದರೂ ಮಾಡಿ ಸುರಕ್ಷಿತವಾಗಿ ನಿಮ್ಮನ್ನು ಕರೆತರುತ್ತೇವೆ. ನೀವು ಆತಂಕಕ್ಕೆ ಒಳಗಾಗಬಾರದು ಎಂದು ಸಚಿವ ಅಭಯ ನೀಡಿದರು.

ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ಯುಕ್ರೇನ್ ನಲ್ಲಿರುವ ವಿದ್ಯಾರ್ಥಿಗಳನ್ನು ಮತ್ತು ಭಾರತೀಯ ನಾಗರೀಕರನ್ನು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸುರಕ್ಷಿತವಾಗಿ ಕರೆ ತಂದಿದೆ. ಉಳಿದವರನ್ನು ಕರೆತರುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಿಮ್ಮನ್ನು ಕೂಡ ಶೀಘ್ರವೇ ಕರೆತರಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ. ನಿಮ್ಮ ತಂದೆ-ತಾಯಿ, ಸಹೋದರ-ಸಹೋದರಿಯರು ಆತಂಕದಲ್ಲಿರುತ್ತಾರೆ. ನಿಮ್ಮ ಕುಟುಂಬ ವರ್ಗದವರಿಗೆ ಕರೆ ಮಾಡಿ ತಾವು ಸುರಕ್ಷಿತವಾಗಿರುವುದಾಗಿ ತಿಳಿಸುವಂತೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ನಾಗರಿಕ ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧಿಯಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮತ್ತಿತರರು ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಭರವಸೆ ತುಂಬಿದರು. ಅಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳುವವರೆಗೂ ಮನೆಯಿಂದಾಗಲಿ ಇಲ್ಲವೇ ಬಂಕರ್ ನಿಂದ ಆಚೆ ಬರಬೇಡಿ. ನೀರು, ಊಟ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ. ಅಧಿಕಾರಿಗಳು ಹೊರಡಿ ಎಂದು ಹೇಳಿದಾಗ ಎಲ್ಲರೂ ಸುರಕ್ಷಿತವಾಗಿ ಬನ್ನಿ ಎಂದು ಸಚಿವ ನಿರಾಣಿ ಸಲಹೆ ನೀಡಿದರು.

ಓದಿ :ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ

ABOUT THE AUTHOR

...view details