ಬಾಗಲಕೋಟೆ: 'ಸಚಿವ ಈಶ್ವರಪ್ಪ ಅಭಿಮಾನಪೂರ್ವಕವಾಗಿ ಹಾಗೆ ಹೇಳಿರಬಹುದು. ನಮ್ಮ ಮೇಲಿರುವ ಪ್ರೀತಿ, ವಿಶ್ವಾಸ ಹಾಗೂ ನಮ್ಮ ಕೆಲಸ, ಸಾಧನೆಯ ಹಾದಿ ನೋಡಿ ಈ ರೀತಿ ಹೇಳಿದ್ದಾರೆ. ಇದಕ್ಕೆ ನಾನು ಋಣಿ' ಎಂದು ಮುರುಗೇಶ ನಿರಾಣಿ ಹೇಳಿದರು
'ನಮ್ಮ ಹಿರಿಯ ಸಹೋದರ ಬಸವರಾಜ್ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಾವು ಅವರಿಗೆ ಎಲ್ಲಾ ರೀತಿಯಲ್ಲಿಯೂ ಸಹಕಾರಿಯಾಗಿತ್ತೇವೆ. ಈ ಮೂಲಕ 2023ಕ್ಕೆ ಸಂಪೂರ್ಣವಾಗಿ ಬಿಜೆಪಿಯನ್ನು ಅಣಿಯಾಗಿಸುವುದು ನಮ್ಮ ಗುರಿ. ಕನಿಷ್ಠ ರಾಜ್ಯದಲ್ಲಿ 125 ಎಂಎಲ್ಎ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು. ಹೀಗಾಗಿ ಹೆಚ್ಚಿನ ಸ್ಥಾನ ಗಳಿಸಲು ನಾವು ಗಮನ ಹರಿಸಿದ್ದೇವೆ' ಎಂದರು.
ಸಿಎಂ ಸ್ಥಾನ ಸಿಗುತ್ತಾ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, 'ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಆಗುತ್ತದೆ. ಅದನ್ನೆಲ್ಲಾ ನಮ್ಮ ದೊಡ್ಡವರು ಮಾಡ್ತಾರೆ. ಹಿರಿಯರು ಏನೇ ಜವಾಬ್ದಾರಿ ಕೊಟ್ಟರೂ ನಿಷ್ಠಾವಂತ ಕಾರ್ಯಕರ್ತನಾಗಿ ನಿಭಾಯಿಸುತ್ತೇನೆ. 2023ರವರೆಗೆ ಸಿಎಂ ಬೊಮ್ಮಾಯಿ ಅವರೇ ಮುಂದುವರಿಯುತ್ತಾರೆ. ಈ ಹಿಂದೆ ಬೊಮ್ಮಾಯಿ ಮತ್ತು ನಾನು ಸಿಎಂ ರೇಸ್ನಲ್ಲಿದ್ದೆವು. ಆಗ ಬೊಮ್ಮಾಯಿಯವರ ಹೆಸರು ಅನೌನ್ಸ್ ಆದ್ರೂ ನನ್ನಲ್ಲಿ ಬದಲಾವಣೆಗಳು ಆಗಲಿಲ್ಲ. ನಾನು ಆಗಿದ್ದಕ್ಕಿಂತಲೂ ಹೆಚ್ಚು ಸಂತೋಷಪಟ್ಟೆ' ಎಂದು ಹೇಳದರು.