ಬಾಗಲಕೋಟೆ :ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ನಾವು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸರ್ಕಾರ ಬದ್ಧ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಸಿಎಂ ಮತ್ತು ನಾನು ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೇವೆ. ಲೀಗಲ್ ಟೀಂ ಜೊತೆ ಸಭೆ ಆಗಿದೆ. ಕೇಂದ್ರ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ.
ಈಗ ನಾವು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಮಾಡುತ್ತೇವೆ. ಆಗ ಸರ್ಕಾರದ ಮೊದಲ ಆದ್ಯತೆ ಭೂಸ್ವಾಧೀನ ಮತ್ತು ಪುನರ್ವಸತಿ ಕಲ್ಪಿಸುತ್ತೇವೆ ಎಂದರು.
ನೀರಾವರಿ ಯೋಜನೆಗಳ ಕುರಿತಂತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಹಿತಿ.. ಇದಕ್ಕಾಗಿ ಸುಮಾರು 6500 ಎಕರೆ ಭೂಮಿ ಬೇಕಾಗಿದೆ. 20 ಹಳ್ಳಿಗಳ ಸ್ಥಳಾಂತರ ಕೆಲಸಕ್ಕೆ ಏನು ಬೇಕು ಅದನ್ನ ಮಾಡುತ್ತಿದ್ದೇವೆ. ಮಹಾರಾಷ್ಟ್ರ ಜೊತೆ ಸೇರಿ ಸುಪ್ರೀಂಕೋರ್ಟ್ನಲ್ಲಿ ವಿನಂತಿ ಮಾಡಲಾಗಿದೆ.
ತಕ್ಷಣ ಕೃಷ್ಣಾ ನ್ಯಾಯಾಧೀಕರಣ 2ರ ನೀರಿನ ಹಂಚಿಕೆ ಗೆಜೆಟ್ ನೋಟಿಫಿಕೇಶನ್ ಆಗಬೇಕು. ಕೇಂದ್ರ ಮಂತ್ರಿಗಳು ಮತ್ತು ಅಧಿಕಾರಿಗಳು ಅಲ್ಲದೆ ಲೀಗಲ್ ಟೀಂ ಜೊತೆ ಚರ್ಚಿಸಿ ಕೆಲಸ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ 51 ಸಾವಿರ ಕೋಟಿ ಎಸ್ಟಿಮೇಟ್ ಮಾಡಿದ್ದಾರೆ. ಈಗ ಇವತ್ತಿಗೆ ರಿ ಕಾಸ್ಟ್ ಮಾಡಿದ್ರೆ 65 ಸಾವಿರ ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೆ ಕೂಡಲೇ ಕಾರ್ಯಪ್ರವೃತ್ತರಾಗಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಇದೇ ಸಮಯದಲ್ಲಿ ಅಧಿವೇಶನದಲ್ಲಿ ಪರಿಷತ್‌ನ ಕಾಂಗ್ರೆಸ್ ಸದಸ್ಯ ಆರ್ ಬಿ ತಿಮ್ಮಾಪೂರ ಭಾಷಣ ವಿಚಾರವಾಗಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯವಾಗಿದೆ. ಕೆಲಸಕ್ಕೆ ಬಾರದವನ ಭಾಷಣ ತಗೊಂಡು ನಾನೇನು ಮಾಡಲಿ ಎಂದು ತಿರುಗೇಟು ನೀಡಿದರು.
ಆರು ವರ್ಷ ಅವರೇ ಇದ್ದರಲ್ಲ ಮಾಡಬೇಕಿತ್ತು, ಯಾಕೆ ಮಾಡಲಿಲ್ಲ? ಕಾಗೋಡು ತಿಮ್ಮಪ್ಪ ಮತ್ತು ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮಿತಿಗಳು ಆಗಿದ್ದವು. ಆಗ ಅವರು ಏನೂ ಮಾಡಿಲ್ಲ. ಹಾಗೆ ಇಟ್ಟು ಹೋಗಿದ್ದಾರೆ. ಈಗ ಭಾಷಣ ಮಾಡುತ್ತಾರೆ ಎಂದು ವ್ಯಂಗ್ಯ ವಾಡಿದರು.
ಘಟಪ್ರಭಾ ನದಿಗೆ ಅವೈಜ್ಞಾನಿಕ ಬ್ಯಾರೇಜ್ ನಿರ್ಮಾಣ ವಿಚಾರವಾಗಿ ಮಾತನಾಡಿ, ಎಲ್ಲ ಬ್ಯಾರೇಜ್ಗಳು ಅವೈಜ್ಞಾನಿಕವಾಗಿ ಆಗಿವೆ ಅಂತಲ್ಲ. ಕೆಲವರ ಆರೋಪ ಇರುವುದು ಕಲಾದಗಿ ಬಳಿಯಿರುವ ಕಾತರಕಿ ಬ್ಯಾರೇಜ್ ಬಗ್ಗೆ.
ಕಾತರಕಿ ಬ್ಯಾರೇಜ್ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ ಅನ್ನೋ ವಾದ ಸುತ್ತಮುತ್ತಲಿನ ಗ್ರಾಮಸ್ಥರದ್ದಾಗಿದೆ. ಆ ಬ್ಯಾರೇಜ್ ಬಗ್ಗೆ ವೈಜ್ಞಾನಿಕವಾಗಿ ಸರ್ವೇ ಮಾಡಿ ಅವರಿಗೆ ಕೊಡಿ ಅಂತಾ ಹೇಳಿದ್ದೇನೆ. ಆ ವರದಿ ಬಂದ ಬಳಿಕ ನಿರ್ಣಯ ಮಾಡುವೆ ಎಂದರು.
ತಡೆಗೋಡೆ ಕಟ್ಟಡ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ನಾರ್ವೆ ಮಾದರಿಯಲ್ಲಿ ಇಲ್ಲಿನ ನದಿಗೆ ತಡೆಗೋಡೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಕೂಡಲಸಂಗಮದ ಐಕ್ಯ ಮಂಟಪದಲ್ಲಿ ತಡೆಗೋಡೆ ಮಾಡಿದ್ದೇವೆ. ಆದರೆ, ಒಳಗಡೆ ನೀರು ಬಸಿದು ಬರುತ್ತಿದೆ.
ಅದನ್ನ ಮೋಟರ್ ಸಹಾಯದಿಂದ ನೀರು ಎತ್ತುತ್ತಿದ್ದೇವೆ. ಊರುಗಳಿಗೆ ತಡೆಗೋಡೆ ಕಟ್ಟಿದ್ರೆ ಅಕಸ್ಮಾತ್ ನೀರು ಬಸಿದು ಬಂದ್ರೆ, ಅಲ್ಲಿದ್ದವರ ಗತಿಯೇನು? ಪ್ರವಾಹ ತಡೆಗೆ ತಡೆಗೋಡೆ ನಮ್ಮ ಜನರ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸ್ಪಷ್ಟ ಪಡಿಸಿದರು.