ಬಾಗಲಕೋಟೆ :ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ತಮ್ಮ ರಾಜಕೀಯ ಜಂಜಾಟದ ಮಧ್ಯೆಯೂ 'ಗರಡಿ' ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಬಾದಾಮಿ ಚಾಲುಕ್ಯರ ಕಾಲದ ಸ್ಮಾರಕಗಳ ಮುಂದೆ ಚಿತ್ರದ ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ.
ಬಾದಾಮಿಯಲ್ಲಿ ಗರಡಿ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಸಚಿವ ಬಿ ಸಿ ಪಾಟೀಲ್.. ಸೌಮ್ಯ ಫಿಲ್ಮಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಗರಡಿ ಚಿತ್ರದಲ್ಲಿ, ನಟ ಸೂರಿ ಹಾಗೂ ನಟಿ ಸೋನಾಲ್ ನಟಿಸಲಿದ್ದಾರೆ. ಬಾದಾಮಿಯ ಮೇಣ ಬಸದಿ ಸುತ್ತಮುತ್ತಲಿನ ಪ್ರದೇಶ ಸೇರಿ ಭೂತನಾಥ ದೇಗುಲದ ಬಳಿ ಕೆಲ ದೃಶ್ಯ ಸೆರೆ ಹಿಡಿಯಲಾಗಿದೆ.
ಗುಹಾಲಯದ ಬಳಿ ಇಂದು ಕೆಲ ದ್ರಶ್ಯ ಸೆರೆ ಹಿಡಿಯಲಾಗಿದೆ. ಬಾದಾಮಿಯಲ್ಲಿ ಒಂದು ವಾರಗಳ ಕಾಲ ಚಿತ್ರೀಕರಣ ನಡೆಯಲಿದೆ. ಗರಡಿ ಮನೆ ಹಾಗೂ ಕುಸ್ತಿ ಪೈಲ್ವಾನ್ಗಳ ಜೀವನಾಧಾರಿತ ಪ್ರೇಮ ಕತೆಯನ್ನು ಈ ಚಿತ್ರ ಹೊಂದಿದೆ. ಚಿತ್ರದಲ್ಲಿ ಸಚಿವ ಬಿ.ಸಿ ಪಾಟೀಲ್ ಯಜಮಾನನ ಪಾತ್ರ ಮಾಡಲಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, 'ಗರಡಿ' ಚಿತ್ರವನ್ನು ಉತ್ತರ ಕರ್ನಾಟಕ ಮತ್ತು ಮೈಸೂರಿನ ಹೆಚ್ಚಿನ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ಮೈಸೂರು ರಾಜಮಹಾರಾಜರು ಕುಸ್ತಿಗೆ ಪ್ರಾಶಸ್ಯ ನೀಡಿದ್ದರು. ಅದಕ್ಕೆ ಬಾದಾಮಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ ಎಂದರು.
ಸಚಿವ ಸ್ಥಾನದ ಅಧಿಕಾರದ ಒತ್ತಡದ ಕಾರ್ಯ ಚಟುವಟಿಕೆಗಳ ನಡುವೆ ಬಿಡುವಿನ ಸಮಯದಲ್ಲಿ ನಟನೆ ಮಾಡುತ್ತೇನೆ. ನಾನು ಸಿನಿಮಾದಲ್ಲಿ ನಟಿಸಲೆಂದೇ ಪೊಲೀಸ್ ಕೆಲಸವನ್ನು ಬಿಟ್ಟು ಬಂದಿದ್ದೆ. ಸಿನಿಮಾ ಗೀಳು, ಬಿಟ್ಟು ಬಿಡದ ಮಾಯೆ. ನನಗೆ ಕಲೆ ಬಗ್ಗೆ ವಿಶೇಷ ಆಸಕ್ತಿ. ರಾಜಕಾರಣದಲ್ಲಿ ಇದ್ದಾಗಲೂ ಸಿನಿಮಾ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಭಟ್ಟರ 'ಗರಡಿ'ಯಲ್ಲಿ ಕೌರವನ ಅಭಿನಯ.. ಮತ್ತೆ ಬಣ್ಣ ಹಚ್ಚಲಿರುವ ಸಚಿವ ಬಿ.ಸಿ ಪಾಟೀಲ್!