ಬಾಗಲಕೋಟೆ :ನಗರಕ್ಕೆ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸಿದ ಜೈನ್ ಇರಿಗೇಶನ್ ಸಿಸ್ಟಮ್ಸ್ ಕಂಪನಿಯ ಗುತ್ತಿಗೆಯನ್ನಕಪ್ಪುಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೈಗೊಂಡ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 2016ರ ಮಾರ್ಚ್ ತಿಂಗಳಿನಲ್ಲಿ ಅಂದಾಜು 72 ಕೋಟಿ ರೂ.ಗಳ ವೆಚ್ಚದ ಟೆಂಡರ್ ಜೈನ್ ಕಂಪನಿಗೆ ನೀಡಲಾಗಿದೆ. 2021ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಪ್ರಗತಿ ಮಂದಗತಿಯಲ್ಲಿ ನಡೆದಿದೆ. ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಜೈನ್ ಕಂಪನಿಗೆ ನೀಡಿದ ಕಾಮಗಾರಿ ಕೈಬಿಡುವ ಕುರಿತು ಧಾರವಾಡದ ರಾಜ್ಯ ನಗರ ನೀರು ಸರರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಇಂಜಿನಿಯರ್ ಅವರಿಗೆ ಪ್ರಸ್ತಾವನೆ ನೀಡಲಾಗಿದೆ. ಅಲ್ಲದೇ ಕಾಮಗಾರಿ ವಿಳಂಬ ನೀತಿಯಿಂದ ಗುತ್ತಿಗೆದಾರರಿಗೆ ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಂದ ನೋಟಿಸ್ ನೀಡಿ ವಿವರಣೆ ನೀಡಲು ನಿರ್ದೇಶನ ನೀಡಲಾಗಿದ್ದು, ತಪ್ಪಿದ್ದಲ್ಲಿ ಗುತ್ತಿಗೆ ರದ್ದುಪಡಿಸಲು ಸೂಚನೆ ನೀಡಲಾಗಿದೆ ಎಂದರು.