ಬಾಗಲಕೋಟೆ:ರಾಜ್ಯದ ಸಕ್ಕರೆ ಕಾರ್ಖಾನೆಗಳು 2019-20ನೇ ಸಾಲಿನಲ್ಲಿ (ಮೊದಲ ಕಂತು) ರೈತರಿಂದ ಖರೀದಿಸುವ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ (ನ್ಯಾಯ ಮತ್ತು ಲಾಭದಾಯಕ ಬೆಲೆ) ನಿಗದಿಪಡಿಸಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಆದೇಶಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಜೆಂದ್ರ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರ ಮತ್ತು ರೈತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯನ್ನು ಆಧಾರವಾಗಿಟ್ಟುಕೊಂಡು ಪ್ರಸಕ್ತ ಸಾಲಿನ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿಪಡಿಸಿದ್ದಾರೆ ಎಂದು ತಿಳಿಸಿದರು.
ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದ ದರ ನಿರ್ಧರಿಸುವ ಕುರಿತು ಶನಿವಾರ ಪ್ರತ್ಯೇಕ ಸಭೆ ನಡೆಸಿ ನಿರ್ಧರಿಸಲಾಗುವುದು. ಕಳೆದ ಸಭೆಯಲ್ಲಿ ನಿರ್ಧರಿಸಿದಂತೆ 2016-17 ಹಾಗೂ 2017-18ನೇ ಸಾಲಿನಲ್ಲಿ ಹಂಗಾಮಿನ ಘೋಷಿತ ಹೆಚ್ಚುವರಿ ದರವನ್ನು ಕಾರ್ಖಾನೆಗಳು ಆರಂಭದ ಪೂರ್ವದಲ್ಲಿ ಶೇ 50ರಷ್ಟು ಹಾಗೂ ಆರಂಭಿಸಿದ ನಂತರದ 15 ದಿನಗಳಲ್ಲಿ ಉಳಿದ ಶೇ 50ರಷ್ಟು ಬಾಕಿ ಹಣ ಪಾವತಿಸಬೇಕು ಎಂದರು.
ಈ ಸಾಲಿನ ಹಂಗಾಮಿಗೆ ಸಕ್ಕರೆ ಕಾರ್ಖಾನೆ ಹಾಗೂ ರೈತರ ನಡುವಿನ ದ್ವಿಪಕ್ಷೀಯ ಒಪ್ಪಂದದ ನಂತರವೇ ಕಬ್ಬು ನುರಿಸಲು ಆರಂಭಿಸಬೇಕು. ಜಿಲ್ಲೆಯ ವಿವಿಧ ಕಾರ್ಖಾನೆಯ ಮಾಲೀಕರು ರೈತರಿಗೆ ಎಚ್‍ಎನ್‍ಟಿ ದರದಲ್ಲಿ ತಾರತಮ್ಯ ಮಾಡಕೂಡದು. ರೈತರಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಮಾಲೀಕರ ಮತ್ತು ರೈತರ ನಡುವಿನ ಉತ್ತಮ ಸೌಹಾರ್ದತೆ ಇರುವಂತೆ ಮಾಡುವುದೇ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕರ್ತವ್ಯ ಎಂದು ರಾಜೇಂದ್ರ ಹೇಳಿದರು.
ಎಫ್‌ಆರ್‌ಪಿ ದರದ ವಿವರ
ಸಕ್ಕರೆ ಕಾರ್ಖಾನೆಗಳು | ಟನ್ ಕಬ್ಬಿಗೆ ಎಫ್‌ಆರ್‌ಪಿ ದರ (₹ ಗಳಲ್ಲಿ) |
ಬೀಳಗಿ ಶುಗರ್ಸ್ ಲಿಮಿಟೆಡ್ | 2,995 |
ಜೆಮ್ಸ್ ಶುಗರ್ಸ್ ಲಿ. | 2,981 |
ಸಮೀರವಾಡಿಯ ಗೋದಾವರಿ ಶುಗರ್ಸ್ ಲಿ. | 2,830 |
ಉತ್ತೂರಿನ ಇಂಡಿಯನ್ ಕೇನ್ ಪಾವರ್ ಲಿ. | 3,108 |
ಜಮಖಂಡಿಯ ಶುಗರ್ಸ್ ಲಿ. | 3,174 |
ಮುಧೋಳನ ನಿರಾಣಿ ಶುಗರ್ಸ್ ಲಿ. | 2,846 |
ಪ್ರಭುಲಿಂಗೇಶ್ವರ ಶುಗರ್ಸ್ ಲಿ. | 3,157 |
ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಲಿ. | 3,064 |
ನ್ಯಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ) ಲಿ. | 2,987 |
ಸಾಯಿಪ್ರಿಯಾ ಶುಗರ್ಸ್ ಲಿ. | 2,945 |
ಸಾವರಿನ್ ಶುಗರ್ಸ್ ಲಿ. | 2,750 |