ಬಾಗಲಕೋಟೆ:ಪ್ರತಿ ಟನ್ ಕಬ್ಬಿಗೆ2,900 ರೂಪಾಯಿ ಕೊಡುವಂತೆ ರೈತರು ಪಟ್ಟು ಹಿಡಿದಿದ್ದರು. ಆದರೆ ಸಕ್ಕರೆ ಆಡಳಿತ ಮಂಡಳಿಯವರು 2,800 ರೂಪಾಯಿ ಕೂಡುವುದಾಗಿ ತಿಳಿಸಿದ್ದಾರೆ. ಹಾಗಾಗಿ, ಮಧ್ಯಸ್ಥಿಕೆ ವಹಿಸಿದ್ದ ಮೂವರು ಸಚಿವರ ಸಂಧಾನ ಫಲಪ್ರದವಾಗಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಮಾತನಾಡಿ, ಸಕ್ಕರೆ ಕಾರ್ಖಾನೆ ಮತ್ತು ರೈತರ ನಡುವೆ ಉಂಟಾದ ಸಮಸ್ಯೆಗೆ ಇನ್ನೆರಡು ದಿನಗಳಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ರೈತರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಸುದೀರ್ಘ ಚರ್ಚೆ ಒಂದು ಹಂತಕ್ಕೆ ಬಂದರೂ ಸಹ ಕೊನೆಯಲ್ಲಿ ಕಾರ್ಖಾನೆ ಮಾಲೀಕರು ಹೆಚ್ಚಿನ ದರ ನೀಡಲು ಒಪ್ಪಲಿಲ್ಲ. ಎರಡು ದಿನಗಳ ಕಾಲ ತಾಳ್ಮೆಯಿಂದಿರಲು ರೈತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇಲ್ಲಿಯ ಘಟನಾವಳಿಯ ಬಗ್ಗೆ ಮಾಹಿತಿ ನೀಡಿ ರೈತರ ಪರವಾಗಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಹೆಚ್ಚಿನ ದರ ಕೊಡಿಸುವ ಭರವಸೆ: ಈಗಾಗಲೇ ರೈತರ ಸಹಕಾರಿ ಸಕ್ಕರೆ (ರನ್ನ) ಕಾರ್ಖಾನೆಯವರು ಎಚ್.ಎನ್.ಟಿ ಕಡಿತಗೊಳಿಸಿ ಪ್ರತಿ ಟನ್‍ಗೆ 2900 ರೂ. ಕೊಡುವುದಾಗಿ ಘೋಷಿಸಿದ್ದಾರೆ. ಇದೇ ದರವನ್ನು ಉಳಿದ ಎಲ್ಲ ಕಾರ್ಖಾನೆಯವರು ನೀಡಬೇಕು ಎಂಬುದು ರೈತರ ಬೇಡಿಕೆ. ಕಾರ್ಖಾನೆ ಮಾಲೀಕರು ತಾವುಗಳು ಘೋಷಿಸಿದ ದರಕ್ಕಿಂತ ಹೆಚ್ಚಿಗೆ ದರ ನೀಡಲು ಒಪ್ಪಲಿಲ್ಲ. ಆದರೂ ಸಹ ಕಾರ್ಖಾನೆಗಳ ಜೊತೆ ಇನ್ನೊಂದು ಸುತ್ತಿನ ಮಾತುಕತೆ ಮಾಡಿ ರೈತರಗೆ ಹೆಚ್ಚಿನ ದರ ಕೊಡಿಸುವುದಾಗಿ ತಿಳಿಸಿದರು.