ಕರ್ನಾಟಕ

karnataka

By

Published : Mar 2, 2021, 8:43 PM IST

ETV Bharat / state

ಕಡಿಮೆ ದರದಲ್ಲಿ ಮರಳು ಒದಗಿಸಲು ಕ್ರಮ: ಸಚಿವ ನಿರಾಣಿ

ರಾಜ್ಯದೆಲ್ಲೆಡೆ ಅನಧಿಕೃವಾಗಿ ಮರಳು ಹಾಗೂ ಜಲ್ಲಿಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಬರುವ ಆದಾಯ ಪೋಲಾಗುತ್ತಿದ್ದು, ನಿಯಂತ್ರಣ ಮಾಡಿದಷ್ಟು ಅನಧಿಕೃತ ಗಣಿಗಾರಿಕೆ ಹೆಚ್ಚಾಗುತ್ತಿದೆ. ಮರಳು ಉಚಿತವಾಗಿ ದೊರೆಯುವಂತೆ ಮಾಡಿದಲ್ಲಿ ಸಾಮಾನ್ಯ ಜನರಿಗೆ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಲು ಅನುಕೂಲವಾಗಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಮುರುಗೇಶ ನಿರಾಣಿ ಹೇಳಿದ್ದಾರೆ.

Progress review meeting of the Department of Mines and Geology
ಸಚಿವ ಮುರುಗೇಶ ನಿರಾಣಿ ಸಭೆ

ಬಾಗಲಕೋಟೆ:ಬಡ ಜನರಿಗೆ ಕೈಗೆಟುಕುವ ದರದಲ್ಲಿ ಮರಳು ಒದಗಿಸಿದ್ರೆ, ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಮರಳು ನೀತಿ ಜಾರಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಮುರುಗೇಶ ನಿರಾಣಿ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಅನಧಿಕೃತವಾಗಿ ಮರಳು ಹಾಗೂ ಜಲ್ಲಿಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಬರುವ ಆದಾಯ ಪೋಲಾಗುತ್ತಿದ್ದು, ನಿಯಂತ್ರಣ ಮಾಡಿದಷ್ಟು ಅನಧಿಕೃತ ಗಣಿಗಾರಿಕೆ ಹೆಚ್ಚಾಗುತ್ತಿದೆ. ಮರಳು ಉಚಿತವಾಗಿ ದೊರೆಯುವಂತೆ ಮಾಡಿದಲ್ಲಿ ಸಾಮಾನ್ಯ ಜನರಿಗೆ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಲು ಅನುಕೂಲವಾಗಲಿದೆ ಎಂದರು.

ಸಚಿವ ಮುರುಗೇಶ ನಿರಾಣಿ ಸಭೆ

ಉಚಿತವಾಗಿ ಮರಳು ಸಿಗುವಂತೆ ಮಾಡಿದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವವರಿಗೆ ವರದಾನವಾಗಲಿದ್ದು, ಇದರಿಂದ ಮರಳು ಅಭಾವ ತಪ್ಪಿಸಬಹುದಾಗಿದೆ. ಅಲ್ಲದೇ ಸರ್ಕಾರಕ್ಕೆ ಬರುವ ಆದಾಯ ಹೆಚ್ಚಾಗಲಿದೆ. 10 ಲಕ್ಷ ರೂ.ಗಳ ಒಳಗೆ ನಿರ್ಮಿಸುತ್ತಿರುವ ಮನೆಗಳಿಗೆ ಇದು ಅನ್ವಯವಾಗಲಿದೆ. ಹೊಸ ನೀತಿಯನ್ವಯ ಟ್ರ್ಯಾಕ್ಟರ್, ಎತ್ತಿನ ಬಂಡಿ, ದ್ವಿಚಕ್ರ ವಾಹನ, ಮರಳು ಸಾಗಣೆ ಮಾಡಿದರೆ ಕೇಸ್ ದಾಖಲಿಸುವಂತಿಲ್ಲ. ಬೇರೆ ಜಿಲ್ಲೆಗಳಿಗೆ ಸಾಗಾಣಿಕೆ ಮಾಡಿದರೆ ಮಾತ್ರ ಕೇಸ್ ದಾಖಲಿಸಲಾಗುವುದೆಂದು ತಿಳಿಸಿದರು.

ಜಿಲ್ಲೆಯಲ್ಲಿ ಜೆಲ್ಲಿ ಕ್ರಷರ್ ಘಟಕಗಳು 16 ಮಾತ್ರ ಚಾಲ್ತಿಯಲ್ಲಿದ್ದು, ನಮೂನೆ ಡಿ ವಿತರಿಸಿದ 29 ಜೆಲ್ಲಿ ಕ್ರಷರ್ ಘಟಕಗಳಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಬೇಗನೇ ಅನುಮತಿ ನೀಡಬೇಕು. ಏಕೆಂದರೆ ಘಟಕ ಸ್ಥಾಪನೆಗೆ ಬ್ಯಾಂಕ್​​ಗಳ ಮೂಲಕ ಸಾಲ ಪಡೆದಿದ್ದು, ಕಂತು ತುಂಬಲು ಸಾಧ್ಯವಾಗುತ್ತಿಲ್ಲ. ಅನುಮತಿ ತುರ್ತು ನೀಡಿದಲ್ಲಿ ಕ್ರಷರ್ ಪ್ರಾರಂಭವಾದರೆ ಅವರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು. ಇನ್ನು 15 ದಿನಗಳಲ್ಲಿ ಅನುಮತಿಗಾಗಿ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಇದನ್ನೂ ಓದಿ:ಪೋಸ್ಟ್​ ಮಾರ್ಟಮ್​ಗೆ ಕರೆದೊಯ್ಯುವಾಗ ಸತ್ತ ವ್ಯಕ್ತಿಗೆ ಬಂತು 'ಜೀವ'!

ಜಿಲ್ಲೆಯಲ್ಲಿ ಓವರ್ ಲೋಡ್ ಆಗುತ್ತಿರುವ ಬಗ್ಗೆ ಗಣನೆಗೆ ಬಂದಿದ್ದು, ಅವುಗಳ ತಡೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಹುನಗುಂದ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಮೂರು ತರಹದ ಕಲ್ಲು ಸೀಗುತ್ತಿದೆ. ಅವುಗಳಲ್ಲಿರುವ ವ್ಯತ್ಯಾಸದಿಂದ ಹೆಚ್ಚಿನ ಲಾಭವಾಗಲಿದ್ದು, ಬೇರೆಡೆ ರಪ್ತು ಮಾಡುವಾಗ ಗಣನೆಗೆ ತೆಗೆದುಕೊಳ್ಳಲು ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ರೋಹಿತ ಮಾತನಾಡಿ, 2 ಕಬ್ಬಿಣ ಅದಿರಿನ ಘಟಕ, 28 ಕ್ವಾರಿ, 21 ಪಿಂಕ್ ಗ್ರಾನೈಟ್ಸ್ , 15 ಮರಳು ಘಟಕ, 13 ಬಿಲ್ಡಿಂಗ್ ಸ್ಟೋನ್, 16 ಜೆಲ್ಲಿ ಕ್ರಷರ್‍ಗಳು ಚಾಲ್ತಿಯಲ್ಲಿರುವುದಾಗಿ ಸಭೆಗೆ ತಿಳಿಸಿದರು. ನವೀಕರಣಕ್ಕೆ ಬಂದ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ಅನುಮತಿಗೆ ಕ್ರಮವಹಿಸುವುದಾಗಿ ತಿಳಿಸಿದರು.

ABOUT THE AUTHOR

...view details