ಬಾಗಲಕೋಟೆ: ಬಸವ ಜಯಂತಿ ಹಿನ್ನೆಲೆ ಬಸವಣ್ಣನವರ ಐಕ್ಯಸ್ಥಳವಾಗಿರುವ ಕೂಡಲಸಂಗಮಕ್ಕೆ ಮಂಗಳವಾರ ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟೀಲ್ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ದಾರೆ. ಇಲ್ಲಿ ಅವರದೇ ಸರ್ಕಾರ ಇದೆ, ಇಲ್ಲಿಯ ಗೃಹ ಇಲಾಖೆಯಲ್ಲಿ ಏನೇನೋ ಆಗುತ್ತಿದೆ. ಗುತ್ತಿಗೆದಾರರ ಅಸೋಸಿಯೇಷನ್ ಕೆಲ ಸಚಿವರ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಮಾಡಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಅಮಿತ್ ಶಾ ಹಾಗೂ ಮೋದಿ ಅವ್ರು, ನಾ ಖಾವುಂಗಾ.. ನಾ ಖಾನೆದೂಂಗಾ ಎಂದು ಹೇಳುತ್ತಾರೆ. ಪ್ರಾಮಾಣಿಕತೆ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಶೇ 40ರಷ್ಟು ಭ್ರಷ್ಟಾಚಾರ ನಡೆದಿದೆ. ಸ್ವಲ್ಪ ತಿನ್ನುತ್ತಿಲ್ಲ, ಜೀರ್ಣ ಆಗದಷ್ಟು ತಿನ್ನುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಈ ವಿಷಯವಾಗಿ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿಗಳು ಸುಮ್ಮನಿದ್ದಾರೆ. ಇದರ ಅರ್ಥ ಮೌನಂ ಸಮ್ಮತಿ ಲಕ್ಷಣಂ ಎಂದು ವ್ಯಂಗ್ಯವಾಡಿದರು.