ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಉಂಟಾದ ಗಲಭೆಯ ಸಿಡಿ ಬಿಡುಗಡೆ ಮಾಡಿದ ಹಿನ್ನೆಲೆ ಹೈಕೋಟ್೯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
'ಮಂಗಳೂರಿನ ಗಲಭೆ ಪ್ರಕರಣ ಹೈಕೋಟ್೯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು'
ಮಂಗಳೂರಿನ ಗೋಲಿಬಾರ್ ಪ್ರಕರಣವನ್ನು ಹೈಕೋಟ್೯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಗೋಲಿಬಾರ್ ಮಾಡುವುದು ಅಗತ್ಯವಿರಲಿಲ್ಲ. ವಿನಃಕಾರಣ ಗೋಲಿಬಾರ್ ಮಾಡಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ, ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ತನಿಖೆ ನಡೆಸಬಾರದು. ಏಕೆಂದರೆ ಮುಖ್ಯಮಂತ್ರಿಗಳ ಮೂಗಿನ ತುದಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವುದಿಲ್ಲ. ಆದ್ದರಿಂದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಇನ್ನೂ, ಕಾಂಗ್ರೆಸ್ನಲ್ಲಿ ಎರಡು ಬಣ ಇಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್ ಯಾರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತಾರೋ ಅದಕ್ಕೆ ಬದ್ಧ ವಿರುವುದಾಗಿ ಅವರು ತಿಳಿಸಿದರು. ಯಾರೂ ಕೂಡ ರಾಜಕೀಯ ಸನ್ಯಾಸಿಗಳಲ್ಲ. ಎಲ್ಲರಿಗೂ ಆಕಾಂಕ್ಷೆ ಇರುವುದು ಸಹಜ. ನಾನು ಇಲ್ಲಿಯವರೆಗೆ ಯಾವುದೇ ಹುದ್ದೆ ಹಿಂದೆ ಬಿದ್ದವನಲ್ಲ. ಪಕ್ಷವೇ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೂ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ ಎಂದರು.