ಬಾಗಲಕೋಟೆ:ಜಿಲ್ಲೆಯ ಸೀಮೆಕೇರಿ ಪುನರ್ವಸತಿ ಕೇಂದ್ರದಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದ್ದು, ಅನೈತಿಕ ಸಂಬಂಧ ಹಿನ್ನೆಲೆ ಈ ಹತ್ಯೆ ನಡೆದಿದೆ ಎಂಬ ಗುಮಾನಿ ಮೂಡಿದೆ.
ರಮೇಶ್ ಕುಂದರಗಿ (35) ಎಂಬಾತ ಕೊಲೆಯಾಗಿರುವ ವ್ಯಕ್ತಿ. ಮೇಲ್ನೋಟಕ್ಕೆ ಕುತ್ತಿಗೆಗೆ ಹಗ್ಗ ಹಾಕಿ ಕೊಲೆ ಮಾಡಿರುವಂತೆ ಕಂಡು ಬಂದಿದೆ. ಕೊಲೆ ಆದ ವ್ಯಕ್ತಿಗೆ ವಿವಾಹೇತರ ಸಂಬಂಧ ಇತ್ತು. ಈ ಹಿನ್ನೆಲೆ ಕೊಲೆ ಮಾಡಿರಬಹುದೆಂದು ಮೃತನ ಪತ್ನಿಯು ಪೊಲೀಸರ ಬಳಿ ಸಂಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.
ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಗೆಳೆಯರು ಪಾರ್ಟಿ ಮಾಡಿ, ಬಳಿಕ ಹೆಚ್ಚು ಮದ್ಯ ಕುಡಿಸಿ, ಕುತ್ತಿಗೆಗೆ ಹಗ್ಗ ಹಾಕಿ ಕೊಲೆ ಮಾಡಿದ್ದಾರೆ. ನಂತರ ಕಂಬಳಿಯಲ್ಲಿ ಮೃತದೇಹವನ್ನು ಸುತ್ತಿ, ಸೀಮೆಕೇರಿ ಪುನರ್ವಸತಿ ಕೇಂದ್ರದಲ್ಲಿ ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಮಾಹಿತಿ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆಯ ಬಗ್ಗೆ ತನಿಖೆ ನಡೆಸಿ, ಪ್ರಕರಣ ಭೇದಿಸಿದ ಬಳಿಕ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.