ಬಾಗಲಕೋಟೆ: ಈ ಬಾರಿ ಚುನಾವಣೆಯಲ್ಲಿ ತಮ್ಮ ಗೆಲ್ತಾನ, ತಿಮ್ಮ ಸೋಲ್ತಾನ ಅಂತ ಗುರುಗಳೊಬ್ಬರು ಭವಿಷ್ಯ ನುಡಿದಿದ್ದಾರೆ ಎಂದು ಉದ್ಯಮಿ ಮಲ್ಲಿಕಾರ್ಜುನ ಚರಂತಿಮಠ, ಯತ್ನಾಳ್ ಅವರ ಇತ್ತೀಚೆಗಿನ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಬಿಜೆಪಿ ಉಚ್ಛಾಟನೆಗೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಅವರಿಂದ ಈವರೆಗೆ ಶೋಕಾಸ್ ನೋಟಿಸ್ ಆಗಲಿ, ಉಚ್ಛಾಟನೆ ಆದೇಶ ಪತ್ರವಾಗಲಿ ನನ್ನನ್ನು ತಲುಪಿಲ್ಲ. ಹಾಗಾಗಿ ನಾನು ಉತ್ತರ ನೀಡುವ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು. ಮುರುಗೇಶ ನಿರಾಣಿ ಸಣ್ಣತನದ ರಾಜಕೀಯ ಮಾಡಿಲ್ಲ. ಸುಮ್ಮನೇ ಅವರ ಬಗ್ಗೆ ತಪ್ಪು ಕಲ್ಪನೆ ಬಿತ್ತಲಾಗುತ್ತಿದೆ. ಅವರು ಉತ್ತಮ ವ್ಯಕ್ತಿತ್ವದ ವ್ಯಕ್ತಿ ಎಂದರು.
ಉದ್ಯಮಿ ಮಲ್ಲಿಕಾರ್ಜುನ ಚರಂತಿಮಠ ನಾನು ಯಾರನ್ನು ಟೀಕೆ ಮಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಆದರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಬಾಗಲಕೋಟೆ ಮತಕ್ಷೇತ್ರದಲ್ಲಿ ಬದಲಾವಣೆ ಇದೆ. ಕಾರ್ಯಕರ್ತರ ಜೊತೆ ಕುಳಿತು ಮಾತನಾಡದವರು ರಸ್ತೆ ಮೇಲೆ ನಿಂತು ಊಟ ಬಡಿಸುತ್ತಿದ್ದಾರೆ. ನಾವು ಗೊಂದಲದಲ್ಲಿ ಇಲ್ಲ ಮತ್ತು ಯಾವುದೇ ತಪ್ಪು ಮಾಡಿಲ್ಲ. ರಾಜೀ ಆಗುವ ಪ್ರಶ್ನೆಯೇ ಬರುವುದಿಲ್ಲ. ವರಿಷ್ಠರ ಸೂಚನೆ ಮೇರೆಗೆ ಮಾತನಾಡುತ್ತಿಲ್ಲ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.
ಇವರು ಶಾಸಕ ವೀರಣ್ಣ ಚರಂತಿಮಠ ಸಹೋದರ. ಇತ್ತೀಚೆಗೆ ಬಾಗಲಕೋಟೆ ಸಮಾರಂಭಕ್ಕೆ ಬಸವಗೌಡ ಪಾಟೀಲ ಯತ್ನಾಳ ಆಗಮಿಸಿ, ಮುಂದಿನ ಚುನಾವಣೆಯಲ್ಲಿ ವೀರಣ್ಣ ಚರಂತಿಮಠ ಗೆಲುವು ಖಚಿತ. ಅವರ ತಮ್ಮನೂ ತಿಮ್ಮನೂ ರಾಜಕೀಯ ಮಾಡಿದರೂ ನಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಮಲ್ಲಿಕಾರ್ಜುನ ಚರಂತಿಮಠ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ ನಾನೇ ಸ್ಟಾರ್ ಕ್ಯಾಂಪೇನರ್: ಬಸನಗೌಡ ಪಾಟೀಲ್ ಯತ್ನಾಳ್