ಬಾಗಲಕೋಟೆ: ದೆಹಲಿಯ ನಿಜಾಮುದ್ದೀನ್ನಲ್ಲಿ ಪಾಲ್ಗೊಂಡಿದ್ದ ರಾಜ್ಯದ 300 ಜನರ ಬಗ್ಗೆ ಮಾಹಿತಿ ಇದ್ದು, ಅದರಲ್ಲಿ 40 ಜನರನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ 12 ಜನರನ್ನು ಕರೊನಾ ವೈರಸ್ ಶಂಕೆ ಹಿನ್ನೆಲೆ ತಪಾಸಣೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವರಾದ ಬಿ.ಶ್ರೀರಾಮಲು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೆಹಲಿಯ ಪ್ರಾರ್ಥನಾ ಮಂದಿರದಲ್ಲಿ 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿರುವ ಮಾಹಿತಿ ಇದ್ದು, ಕರ್ನಾಟಕದಿಂದ ಭಾಗವಹಿಸಿದ್ದ 300ಕ್ಕೂ ಹೆಚ್ಚು ಜನರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಆರೋಗ್ಯದ ದೃಷ್ಠಿಯಿಂದ ದೆಹಲಿಯ ಸಭೆಯಲ್ಲಿ ಭಾಗವಹಿಸಿದ್ದ ಜನರು ಸ್ವಯಂ ಪ್ರೇರಿತವಾಗಿ ಬಂದು ತಪಾಸಣೆಗೆ ಒಳಗಾಗಬೇಕು ಎಂದು ಸಚಿವ ಶ್ರೀರಾಮಲು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 101ಕ್ಕೆ ಏರಿದೆ. 3 ಜನ ಬಲಿಯಾಗಿದ್ದು, ಇದುವರೆಗೂ ಯಾವುದೇ ರೋಗಿಯನ್ನು ವೆಂಟಿಲೇಟರ್ನಲ್ಲಿ ಇಡುವಂತಹ ಗಂಭೀರತೆ ಇಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೋವಿಡ್-19 ಆಸ್ಪತ್ರೆ ತೆರೆಯುವುದಕ್ಕೆ ನಿರ್ಧಾರ ಮಾಡಿದ್ದು, ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಗೆ ಆದೇಶ ಮಾಡಲಾಗಿದೆ ಎಂದರು. ಇದೇ ಸಮಯದಲ್ಲಿ ಬೀಳಗಿ ಶುಗರ್ಸ್ ವತಿಯಿಂದ 20 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.