ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಸೋಂಕಿತ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಆರು ವಿದ್ಯಾರ್ಥಿಗಳನ್ನು ವಸತಿ ನಿಲಯದಲ್ಲಿ ಪ್ರತ್ಯೇಕವಾಗಿ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಕಳೆದ 4 ತಿಂಗಳಿಂದ ಜಮಖಂಡಿ ವಿಭಾಗದಲ್ಲಿ ಪ್ರಕರಣಗಳು ಕಂಡುಬಂದಿರಲಿಲ್ಲ. ಕೋವಿಡ್-19 ಎರಡನೇ ಅಲೆ ಆರಂಭವಾಗಿದ್ದು, 10-12 ದಿನಗಳಲ್ಲಿ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಮೊನ್ನೆ ಮುಧೋಳದಲ್ಲಿ 12 ಮತ್ತು ಜಮಖಂಡಿಯಲ್ಲಿ ಒಂದು ಕೇಸ್ ಕಂಡುಬಂದಿತ್ತು. ಈಗ ಮಹಾಲಿಂಗಪುರದಲ್ಲಿ ಎಂಟು ವಿದ್ಯಾರ್ಥಿಗಳಲ್ಲಿ ಪತ್ತೆಯಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಕೋವಿಡ್ ನಿಯಮಗಳನ್ನು ಪಾಲಸುವಂತೆ ತಿಳಿಸಿದರು.
ಶಾಲೆಯಲ್ಲಿ 6 ರಿಂದ 10ನೇ ತರಗತಿಯ 115 ಮಕ್ಕಳು ಓದುತ್ತಿದ್ದಾರೆ. 8 ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ. ಅವರಲ್ಲಿ ಕೆಮ್ಮು, ನೆಗಡಿ, ಜ್ವರದಂತಹ ಯಾವುದೇ ಲಕ್ಷಣಗಳಿಲ್ಲ ಎಂದರು.