ಬಾಗಲಕೋಟೆ: ಜಿಲ್ಲೆಯ ತೇರದಾಳ, ಮಹಾಲಿಂಗಪುರ, ರಬಕವಿ-ಬನಹಟ್ಟಿ, ಅಮೀನಗಡ, ಗುಳೇದಗುಡ್ಡ, ಇಳಕಲ್, ಕಮತಗಿ ಮುಂತಾದೆಡೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ನೇಕಾರರಿದ್ದು, ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಯಲ್ಲಿಯೇ ಮಗ್ಗಗಳನ್ನು ಇಟ್ಟುಕೊಂಡು ನೇಕಾರಿಕೆಯಲ್ಲಿ ನಿರತರಾಗಿರುವ ಕುಟುಂಬಗಳು ಈಗ ಲಾಕ್‍ಡೌನ್‍ದಿಂದ ತಮ್ಮ ಜೀವನ ಸಾಗಿಸುವುದು ಹೇಗೆ ಎಂಬ ಆತಂಕದಲ್ಲೇ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರಿಗೆ ಕೊಟ್ಟ ಪರಿಹಾರ ನಮಗೇಕಿಲ್ಲ?: ಇದು ನೇಕಾರರ ಅಳಲು - ಲಾಕ್‍ಡೌನ್ ಸಮಸ್ಯೆಗಳು
ದೇಶದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದೆ. ಎಲ್ಲಾ ಕ್ಷೇತ್ರಗಳಂತೆ ನೇಕಾರಿಕೆಯ ಮೇಲೆಯೂ ಕೂಡಾ ಲಾಕ್‍ಡೌನ್ ಕರಿನೆರಳು ಬಿದ್ದಿದ್ದು, ನೇಕಾರರ ಬದುಕು ಚಿಂತಾಜನಕವಾಗಿದೆ.
ಇಳಕಲ್ ಸೀರೆ, ಗುಳೇದಗುಡ್ಡ ಖಣಗಳನ್ನು ದೇಶ, ವಿದೇಶಗಳಲ್ಲಿ ಪರಿಚಯಿಸಿರುವ ಬಾಗಲಕೋಟೆ ಈಗ ಸ್ತಬ್ಧವಾಗಿದೆ. ನೇಕಾರಿಕೆಯ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗಬೇಕಿದ್ದ ಈ ತಿಂಗಳಲ್ಲಿಯೇ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ನಿಂದಾಗಿ ಅವರ ಕೈಗಳನ್ನು ಕಟ್ಟಿಹಾಕಿದಂತಾಗಿದೆ.
ಲಾಕ್‍ಡೌನ್ ತೆರವಾದ್ರೆ ನೇಕಾರರ ಬದುಕು ಸ್ವಲ್ಪ ಚೇತರಿಕೆ ಕಾಣಬಹುದು ಎಂದು ಹೇಳಲಾಗುತ್ತಿದೆ. ಇಲ್ಲವಾದರೆ ಗಂಜಿಕೇಂದ್ರದಲ್ಲೇ ಊಟ ಮಾಡಬೇಕಾದಂತಹ ಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ ಅನ್ನೋ ಮನಸ್ಥಿತಿಯಲ್ಲಿ ನೇಕಾರರಿದ್ದಾರೆ. ನೇಕಾರರೆಲ್ಲರಿಗೂ ಉಜ್ವಲ್ ಯೋಜನೆ ಇಲ್ಲ ಕೆಲವೊಂದು ಜನರಿಗೆ ಮಾತ್ರ ಇದೆ. ಹೀಗಾಗಿ ಗ್ಯಾಸ್ ತೆಗೆದುಕೊಳ್ಳಲು ಕೂಡಾ ಬಡ ನೇಕಾರರಿಗೆ ಮುಂದಿನ ತಿಂಗಳಿಂದ ಕಷ್ಟವಾಗುತ್ತದೆ. ಜನಧನ್ ಖಾತೆಯೂ ಬಹುಪಾಲು ಮಂದಿಯಲ್ಲಿ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಸಹಾಯಧನ ಕೂಡಾ ಲಭಿಸುತ್ತಿಲ್ಲ.