ಬಾಗಲಕೋಟೆ:ವಿಮಾನ ನಿಲ್ದಾಣ ಹಾಗೂ ಕಾರ್ಖಾನೆ ನಿರ್ಮಾಣಕ್ಕಾಗಿ 400 ಎಕರೆ ಸರ್ಕಾರಿ ಜಮೀನು ಇದೆ. ಇನ್ನುಳಿದ 1,600 ಎಕರೆ ಬಿತ್ತನೆಗೆ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ನಾವು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಯೋಗ್ಯ ದರದಲ್ಲಿ ಪರಿಹಾರ ಧನ: ಬೀಳಗಿ ಪಟ್ಟಣದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರು ಸ್ವ ಇಚ್ಛೆಯಿಂದ ಭೂಮಿ ನೀಡಲು ಮುಂದೆ ಬರುತ್ತಾರೋ ಅವರ ಭೂಮಿಗೆ ಯೋಗ್ಯ ದರದಲ್ಲಿ ಪರಿಹಾರ ಧನ ನೀಡುತ್ತೇವೆ. ಸರ್ಕಾರದ ವತಿಯಿಂದ ಪ್ರತಿ ಕುಟುಂಬಗಳಿಗೆ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಬೋರ್ವೆಲ್ ಹಾಕಿಸಿ ಕೊಡುವ, ಮನೆಗಳನ್ನು ಕಟ್ಟಿಸಿ ಕೊಡುವ, ನಂತರ ಅವರು ಬೇರೆ ಕಡೆಗೆ ಭೂಮಿ ಖರೀದಿಸಲು ಸ್ಟಾಂಪ್ ಡ್ಯೂಟಿ ಎಕ್ಸಂಷನ್ ಹಾಗೂ ಭೂಮಿ ಕಳೆದುಕೊಂಡ ರೈತರ ಕುಟುಂಬದಲ್ಲಿ ಅವರ ಶಿಕ್ಷಣ ಅನುಗುಣವಾಗಿ ಉದ್ಯೋಗ ನೀಡುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ತಿಳಿಸಿದರು.
ಮನವಿ ಮಾಡಿಕೊಂಡ ಸಚಿವ ನಿರಾಣಿ: ವಿಮಾನ ನಿಲ್ದಾಣ ಹಾಗೂ ಕಾರ್ಖಾನೆ ಸ್ಥಾಪನೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು, ಯಾರು ಜಮೀನು ನೀಡುವುದಿಲ್ಲ ಎಂದು ಹೇಳುತ್ತಾರೋ ಅಂತವರ ಭೂಮಿಯನ್ನು ನಾವು ಒತ್ತಾಯ ಪೂರ್ವಕವಾಗಿ ವಶಪಡಿಸಿಕೊಳ್ಳುವುದಿಲ್ಲ. ಯಾವುದೇ ಭಾಗದ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಶಿಕ್ಷಣ ವ್ಯವಸ್ಥೆ, ಕೈಗಾರಿಕೆಗಳು ಹಾಗೂ ವಿಮಾನ ನಿಲ್ದಾಣಗಳು ಬಂದಾಗ ಮಾತ್ರ ಆ ಪ್ರದೇಶಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರೈತ ಕುಟುಂಬ ಹಾಗೂ ಹೋರಾಟ ನಿರತರಿಗೆ ಸಚಿವರು ವಿನಂತಿ ಮಾಡಿಕೊಂಡರು.