ಬಾಗಲಕೋಟೆ: ಉತ್ತರ ಕರ್ನಾಟಕ ದಲ್ಲಿಯೇ ಕಿಚಡಿ ಜಾತ್ರೆ ಎಂದು ಚಿಮ್ಮಡಿ ಗ್ರಾಮದಲ್ಲಿ ಹೆಸರುವಾಸಿಯಾಗಿದ್ದು, ಲಕ್ಷಾಂತರ ಭಕ್ತರು ಆಗಮಿಸಿ ಪ್ರಸಾದ ಸೇವನೆ ಮಾಡುವ ಮೂಲಕ ಗಮನ ಸೆಳೆದರು. ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಪ್ರಭುಲಿಂಗೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷ ಕಿಚಡಿ ಪ್ರಸಾದ ಮಾಡಲಾಗುತ್ತದೆ. ಇಂದಿನ ಆಧುನಿಕ ಯುಗದ ಭರಾಟೆ ಮಧ್ಯೆಯೂ ಕಿಚಡಿ ಜಾತ್ರೆ ಆಕರ್ಷಣೆ ಕೇಂದ್ರ ವಾಗಿದೆ. ಈ ಜಾತ್ರೆಗೆ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಭಕ್ತರ ದಂಡು ಆಗಮಿಸಿ, ಪ್ರಸಾದ ಸೇವನೆ ಮಾಡುತ್ತಾರೆ. ಅಕ್ಕಿ ಬೇಳೆ ಸೇರಿದಂತೆ 125 ಕ್ವಿಂಟಲ್ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಭುಲಿಂಗೇಶ್ವರ ದೇವರ ಕಿಚಡಿ ಸೇವಿಸಿ ಭಕ್ತ ಸಮೂಹ ಪುನೀತರಾಗುತ್ತಾರೆ. ಇಲ್ಲಿಗೆ ಬಂದು ಪ್ರಸಾದ ಸ್ವೀಕಾರ ಮಾಡಿದರೆ ಎಲ್ಲಾ ರೋಗ ರುಜಿಗಳು ದೂರು ಆಗುತ್ತವೆ ಎಂಬ ನಂಬಿಕೆ ಇದೆ. 200 ವರ್ಷಗಳ ಇತಿಹಾಸ ಇರುವ ಈ ಕಿಚಡಿ ಜಾತ್ರೆ ವಿಜಯಪುರದಿಂದ ಬೇಳೆ, ಬೆಳಗಾವಿಯಿಂದ ಅಕ್ಕಿ, ಬ್ಯಾಡಗಿಯಿಂದ ಮೆಣಸಿನಕಾಯಿ ಹಾಗೂ ಹುಬ್ಬಳ್ಳಿಯಿಂದ ಮಸಾಲೆ ಸಾಮಗ್ರಿ ತೆಗೆದುಕೊಂಡು ಬರಲಾಗುತ್ತದೆ.
ಹಿಂದಿನ ಪವಾಡ ನೆನೆಯುವ ಗ್ರಾಮಸ್ಥರು.. ಹಲವು ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಅಕ್ಕಿ ತರುವ ಸಮಯದಲ್ಲಿ ಪೊಲೀಸರು ಲಾರಿ ಹಿಡಿದಿದ್ದರು. ಈ ವೇಳೆ ಪೊಲೀಸರು ಲಾರಿಯೊಳಗೆ ಏನಿದೆ ಅಂತಾ ಭಕ್ತರಿಗೆ ಕೇಳಿದರು. ಆಗ ಭಕ್ತರು ಮರಳು ಇದೆ ಅಂತಾ ತಿಳಿಸಿದ್ದರು. ಪೊಲೀಸರು ಪರಿಶೀಲನೆ ನಡೆಸಿದಾಗ ಮರಳು ಕಂಡಿದೆ. ಇದರಿಂದ ಭಕ್ತರು ಚಿಂತೆಗೊಳಗಾಗುತ್ತಲೇ ಗ್ರಾಮ ಸೇರಿದ್ದರು. ಆಗ ಲಾರಿ ಪರಿಶೀಲಿಸಿದಾಗ ಅಕ್ಕಿ ಕಂಡಿತ್ತು ಎಂದು ಗ್ರಾಮದ ಮುಖಂಡರು ಹಿಂದೆ ಆಗಿರುವ ಪವಾಡ ಬಗ್ಗೆ ಮಾಹಿತಿ ನೀಡಿದರು.