ಬಾಗಲಕೋಟೆ: ಗೃಹ ಸಚಿವ ಜಿ. ಪರಮೇಶ್ವರ್ ಅವರ ಮೇಲೆ ನನಗೆ ತುಂಬಾ ಗೌರವವಿದೆ. ಆದರೆ, ಅವರ ಬಾಯಲ್ಲಿ ಇಂತಹ ಮಾತು ಏಕೆ ಬಂದಿತೋ ಗೊತ್ತಿಲ್ಲ. ಹಿರಿಯ ರಾಜಕಾರಣಿ ಅಲ್ಲದೇ ವೈದ್ಯರಾದ ಅವರ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ದೇಶದಲ್ಲಿ ಹಿಂದೂ ಧರ್ಮವನ್ನು ಯಾರು ಹುಟ್ಟು ಹಾಕಿದರು? ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ಅವರ ಹೇಳಿಕೆಗೆ ನಗರದಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಪರಮೇಶ್ವರ್ ಅವರು ತಮ್ಮ ತಂದೆ ಮತ್ತು ತಾತನ ಹೆಸರು ಹೇಳಬಹುದು. ಮುತ್ತಜ್ಜನ ಹೆಸರು ಹೇಳಲಿ ನೋಡೊಣ? ಮೂರನೇ ತಲೆಮಾರಿನ ಹೆಸರೇ ನಿನಗೆ ಗೊತ್ತಿಲ್ಲ. ಅಂತಹದರಲ್ಲಿ ನೂರಾರು ವರ್ಷಗಳ ಇತಿಹಾಸ ಇರುವ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಇದು ಸರಿ ಅಲ್ಲ. ನೀವು ರಾಜ್ಯದ ಗೃಹ ಸಚಿವರು. ಮೇಲಾಗಿ ವೈದ್ಯರು, ಈ ರೀತಿ ಪ್ರಶ್ನೆ ಕೇಳುವಂತಹ ಅವಕಾಶ ನಿಮ್ಮಲ್ಲಿ ಬರಬಾರದು ಎಂದು ವ್ಯಂಗ್ಯವಾಡಿದರು.
ಹಿಂದೂ ಧರ್ಮ ತನ್ನದೇಯಾದ ಇತಿಹಾಸ ಹೊಂದಿದ್ದರಿಂದ ಅದಕ್ಕೆ ಸನಾತನ ಧರ್ಮ ಅಂತಲೂ ಕರೆಯುತ್ತಾರೆ. ಯಾರು ಏನೇ ಮಾತನಾಡಲಿ, ಹಿಂದೂ ಸಮಾಜ ಶಾಂತವಾಗಿದೆ. ಕೆಲವರಿಗೆ ಮಾಧ್ಯಮಗಳಲ್ಲಿ ತಮ್ಮ ಹೆಸರು ಬರಬೇಕು ಅನ್ನೋ ಕಾಯಿಲೆ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಹಿಂದೂ ಧರ್ಮದ ಬಗ್ಗೆ ಮಾತನಾಡಲು ನಿಮಗೆ ಅಧಿಕಾರ ಇಲ್ಲ. ಹಾಗಾಗಿ ದಯವಿಟ್ಟು ಕ್ಷಮೆ ಕೇಳಿ ಎಂದು ಒತ್ತಾಯ ಮಾಡಿದರು. ಚಿತ್ರ ನಟ ಪ್ರಕಾಶ್ ರೈ ಹೇಳಿಕೆಯನ್ನು ಖಂಡಿಸಿದ ಅವರು, ಇಂಥವರನ್ನು ನೇರವಾಗಿ ಹುಚ್ಚರು, ಅಯೋಗ್ಯರು ಅಂತ ಅಂದರು ಬೇಜಾರು ಆಗಲ್ಲ. ಹಾಗಾಗಿ ಅವರ ಬಗ್ಗೆ ಹೆಚ್ಚು ಮಾತು ಬೇಡ ಎಂದರು.
ಜಗದೀಶ ಶೆಟ್ಟರ್ ಕುಟುಂಬಸ್ಥರ ಆರೋಪ ವಿಚಾರವಾಗಿ ಮಾತನಾಡಿ, ಯಾರು ಪಕ್ಷದ ಸಿದ್ದಾಂತವನ್ನು ಒಪ್ಪಿ ತಾಯಿ ಅಂತ ತಿಳಿಯುತ್ತಾರೋ ಅವಾಗ ಜನ ಮೆಚ್ಚುತ್ತಾರೆ. ಅದೇ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಏಕೆ ಸೋತರು? ತಾಯಿ ಅಂತ ತಿಳಿದುಕೊಂಡಿರುವ ಪಕ್ಷದ ಬಗ್ಗೆ ಅಪಪ್ರಚಾರ, ಅಪಮಾನ ಮಾಡುತ್ತಾ ಹೋದರೆ ಉದ್ಧಾರ ಆಗಲ್ಲ. ಸನಾತನ ಧರ್ಮದ ಪ್ರಕಾರ ಕೆಟ್ಟ ತಾಯಿ ಇಲ್ಲ. ಕೆಟ್ಟ ಮಗ ಇರಬಹುದು. ಅಂತಹ ಕೆಟ್ಟ ಮಕ್ಕಳಲ್ಲಿ ಜಗದೀಶ ಶೆಟ್ಟರ್ ಕೂಡ ಒಬ್ಬರು ಎಂದು ಟೀಕಿಸಿದರು.