ಬಾಗಲಕೋಟೆ:ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮತ್ತೆ ಜೋರಾಗಿರುವುದರಿಂದ ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನದಿ ಅಬ್ಬರಿಸುತ್ತಿದೆ. ಹೀಗಾಗಿ ಈ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕೃಷ್ಣೆ: ನದಿ ತೀರದತ್ತ ಸುಳಿಯದಂತೆ ಜನರಿಗೆ ಸೂಚನೆ - ಪ್ರವಾಹದ ಭೀತಿ
ಕಳೆದ 15 ದಿನಗಳಿಂದ ತನ್ನ ಒಡಲೊಳಗೆ ಹರಿಯುತ್ತಿದ್ದ ಕೃಷ್ಣಾ ನದಿ ಇಂದು ತುಂಬಿ ಹರಿಯುತ್ತಿದೆ. ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗಿರುವ ಹಿನ್ನೆಲೆ ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ.
ಕಳೆದ 15 ದಿನಗಳಿಂದ ತನ್ನ ಒಡಲೊಳಗೆ ಹರಿಯುತ್ತಿದ್ದ ಕೃಷ್ಣೆ, ಇಂದು ಒಡಲು ತುಂಬಿದ್ದು, ನೀರಿನ ರಭಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆ ರಾಜ್ಯದ ಜನರ ನಿದ್ದೆಗೆಡಿಸಿದೆ. ಇತ್ತೀಚೆಗಷ್ಟೇ ಗಂಜಿ ಕೇಂದ್ರದಿಂದ ತಮ್ಮ ತಮ್ಮ ಗ್ರಾಮಗಳಿಗೆ ಮರಳಿರುವ ಜನರು ಮತ್ತೊಂದು ಪ್ರವಾಹದ ಆತಂಕದಲ್ಲಿ ಬದುಕುವಂತಾಗಿದೆ.
ಹಿಪ್ಪರಗಿ ಜಲಾಶಯದಲ್ಲಿ ಶುಕ್ರವಾರದಂದು 1.06 ಲಕ್ಷ ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಒಟ್ಟು 531 ಮೀ. ಎತ್ತರವಿರುವ ಹಿಪ್ಪರಗಿ ಜಲಾಶಯದಲ್ಲಿ 522.4 ಮೀ.ನಷ್ಟು ನೀರಿನ ಪ್ರಮಾಣವಿದೆ. 525 ಮೀಟರ್ ನಷ್ಟಾದರೆ ಮತ್ತೆ ಅಪಾಯದ ಮಟ್ಟ ಮೀರುವ ಸಾಧ್ಯತೆ ಇದೆ. ಇದೇ ಕಾರಣದಿಂದ ಜನತೆ ನದಿಯ ದಡದತ್ತ ಜಾನುವಾರುಗಳನ್ನು ಒಯ್ಯುವದು, ಬಟ್ಟೆ ಒಗೆಯುವುದು, ಸ್ನಾನಕ್ಕೆಂದು ತೆರಳದಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.