ಬಾಗಲಕೋಟೆ:ಚೀನಾ ದೇಶದಲ್ಲಿ ಹಬ್ಬಿರುವ ಕೊರೊನಾ ವೈರಸ್ ಸೋಂಕು ಜಿಲ್ಲೆಯ ಹುನಗುಂದ ತಾಲೂಕಿನ ರೈತರ ಮೇಲೆಯೂ ಪರಿಣಾಮ ಬೀರಿದೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಅಜವಾನ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ಅದು ಗೋದಾಮಿನಲ್ಲಿ ಕೊಳೆಯುವಂತಾಗಿದೆ. ಹುನಗುಂದ ತಾಲೂಕಿನ ಧನ್ನೂರು ಗ್ರಾಮದಲ್ಲಿಯೇ ಸುಮಾರು ಹತ್ತು ಕ್ವಿಂಟಲ್ನಷ್ಟು ಅಜವಾನ ಬೆಳೆಯನ್ನು ಇಡಲಾಗಿದೆ. ಇಲ್ಲಿನ ರೈತರು ಚೀನಾದಲ್ಲಿ ಹರಡಿರುವ ರೋಗಕ್ಕೆ ಭಯ ಪಡುವಂತಾಗಿದೆ.
ಹುನಗುಂದ ತಾಲೂಕಿನ ರೈತರಿಗೂ ತಟ್ಟಿದ ಕೊರೊನಾ ವೈರಸ್ ಬಿಸಿ... ಅಜವಾನ ಖರೀದಿಸುವವರಿಲ್ಲದೆ ಅನ್ನದಾತರು ಕಂಗಾಲು ಇಲ್ಲಿ ಬೆಳೆದ ಅಜವಾನ್ ಆಂಧ್ರಪ್ರದೇಶದ ಕರ್ನೂಲ್ ಮಾರುಕಟ್ಟೆ ಮೂಲಕ ಚೀನಾ ದೇಶಕ್ಕೆ ರಫ್ತು ಆಗುತ್ತಿತ್ತು. ಹೀಗಾಗಿ ಕಳೆದ ವರ್ಷ ಪ್ರತಿ ಟನ್ಗೆ 30 ಸಾವಿರ ರೂ.ಗಳ ವರೆಗೆ ಮಾರಾಟವಾಗಿತ್ತು. ಆದರೆ ಈ ಬಾರಿ ಕೇವಲ ಐದು ಸಾವಿರಕ್ಕೆ ವ್ಯಾಪಾರಿಗಳು ಕೇಳುತ್ತಿದ್ದಾರೆ. ಕರ್ನೂಲ್ ಮಾರುಕಟ್ಟೆ ತೆಗೆದುಕೊಂಡು ಹೋಗಲು ರೈತರು ಮುಂದಾದ ಸಮಯದಲ್ಲಿ, ಚೀನಾದಲ್ಲಿ ರೋಗ ಹರಡಿ ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ಸದ್ಯ ಅಜವಾನವನ್ನು ಖರೀದಿಸುತ್ತಿಲ್ಲ ಎಂದು ದಲ್ಲಾಳಿಗಳು ತಿಳಿಸಿದ್ದಾರೆ ಅಂತಾರೆ ರೈತರು.
ಹೀಗಾಗಿ ರೈತರು ತಮ್ಮ ಗೋದಾಮುವಿನಲ್ಲಿ ಬೆಳೆದ ಬೆಳೆಯನ್ನು ಸಂಗ್ರಹಿಸಿದ್ದಾರೆ. ಈ ಆತಂಕದ ವಾತಾವರಣ ಹೀಗೆ ಮುಂದುವರೆದರೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ.
ಹುನಗುಂದ ತಾಲೂಕು ಅಷ್ಟೇ ಅಲ್ಲದೆ ಪಕ್ಕದಲ್ಲಿಯೇ ಇರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ ತಾಲೂಕಿನಲ್ಲಿಯೂ ಸಾವಿರಾರು ಎಕರೆ ಪ್ರದೇಶದಲ್ಲಿ ಅಜವಾನ ಬೆಳೆಯಲಾಗಿದೆ. ಈ ಬೆಳೆಗೆ ಹುಬ್ಬಳ್ಳಿ, ಗದಗ, ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇಲ್ಲ. ಆಂಧ್ರಪ್ರದೇಶದ ಕರ್ನೂಲ್ ಮೂಲಕ ಚೀನಾ ದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಚೀನಾ ದೇಶದವರು ಇದರಿಂದ ತಲೆ ನೋವು ನಿವಾರಕ ಜಂಡು ಬಾಂಬ್ನಂತಹ ವಸ್ತುಗಳ ತಯಾರಿಕೆಗೆ ಬಳಸುತ್ತಿದ್ದು ಅಲ್ಲಿನ ಅಜವಾನಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಆದರೀಗ ಚೀನಾಕ್ಕೆ ಮಾರಕ ರೋಗ ಹರಡಿ ವ್ಯಾಪಾರ ವಹಿವಾಟು ಕುಂಠಿತಗೊಂಡ ಪರಿಣಾಮ, ಹುನಗುಂದ ತಾಲೂಕಿನಲ್ಲಿ ಅಜವಾನ್ ಬೆಳೆದ ರೈತರಿಗೂ ಪೆಟ್ಟು ಬಿದ್ದಿದೆ. ಕ್ವಿಂಟಲ್ಗಟ್ಟಲೆ ದಾಸ್ತಾನು ಮಾಡಿ, ಖರೀದಿ ಆಗದ ಹಿನ್ನೆಲೆ ರೈತರು ಆತಂಕಕ್ಕೀಡಾಗಿದ್ದಾರೆ.