ಬಾಗಲಕೋಟೆ: ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘಟನೆ ವತಿಯಿಂದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮರ 241ನೇ ಜಯಂತೋತ್ಸವ ಸಮಾರಂಭ ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಚೆನ್ನಮ್ಮರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ವಿವಿಧ ವಾದ್ಯಗೋಷ್ಠಿಗಳ ಜೊತೆಗೆ ನೂರಾ ಒಂದು ಕುಂಭಮೇಳ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಬಳಿಕ ಯೋಗ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಜ್ಯೋತಿ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ ಮಾತನಾಡಿ, ಪಂಚಮಸಾಲಿ ಜನಾಂಗದವರು ಅಧಿಕಾರ ಮತ್ತು ಹಣಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ. ಇತರ ಸಮಾಜದವರ ಅಭಿವೃದ್ಧಿಗೂ ಶ್ರಮಿಸುತ್ತಾರೆ. ಯಾವುದೇ ಅಪಸ್ವರಗಳ ಬಗ್ಗೆ ಗಮನ ಹರಿಸದೆ ಅಭಿವೃದ್ಧಿಗೆ ಒತ್ತು ನೀಡುವುದೇ ನಮ್ಮ ಕಾಯಕವಾಗಿದೆ. ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಮುಳುಗಡೆಯಾಗುವ ಗ್ರಾಮಗಳ ಅಭಿವೃದ್ಧಿಪಡಿಸಲು ಹಾಗೂ ಪರಿಹಾರ ಧನ ನೀಡುವಂತೆ ಆಗ್ರಹಿಸಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ ಎಂದು ತಿಳಿಸಿದರು.
ಬೀಳಗಿ ಶಾಸಕ ಮುರಗೇಶ್ ನಿರಾಣಿ ಮಾತನಾಡಿ, ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿಯವರ ಆದರ್ಶವನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸಮಾಜದ ಯುವ ಜನತೆಗೆ ಅವರು ಮಾದರಿಯಾಗಿದ್ದಾರೆ ಎಂದು ಎಂದರು.