ಬಾಗಲಕೋಟೆ: ನವನಗರದಲ್ಲಿ ಕಳೆದ ರಾತ್ರಿ (ಬುಧವಾರ) ನಡೆದ ಬಾಲಕಿ ಅಪಹರಣ ಪ್ರಕರಣ ಸುಖ್ಯಾಂತ ಕಂಡಿದೆ. ಆರೋಪಿಗಳು ಆಕೆಯನ್ನ ಸುರಕ್ಷಿತವಾಗಿ ಮನೆ ಮುಂದೆ ಬಿಟ್ಟು ಹೋಗಿದ್ದಾರೆ.
ಟ್ಯೂಷನ್ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ಬಾಲಕಿ ಕೃತಿಕಾ ಬಾಡಗಂಡಿ (7)ಯನ್ನು ರಾತ್ರಿ 8 ಗಂಟೆಗೆ ಸಮಯದಲ್ಲಿ ನಾಲ್ವರು ಕಾರಿನಲ್ಲಿ ಬಂದು ಅಪಹರಣ ಮಾಡಿಕೊಂಡು ಹೋಗಿದ್ದರು. ನಂತರ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆ ಬಾಲಕಿ ತಾಯಿ ಸುನಿತಾ ಎಂಬುವವರು ನವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆ ಪೊಲೀಸರು ರಾತ್ರಿಯಿಂದಲೇ ಶೋಧ ಕಾರ್ಯ ನಡೆಸಿದ್ದರು. ಈ ವಿಷಯ ತೀವ್ರ ಚರ್ಚೆ ಆಗುತ್ತಿರುವ ಹಿನ್ನೆಲೆ ಹಾಗೂ ಪೊಲೀಸ್ ಶೋಧ ಕಾರ್ಯ ನಡೆಸುತ್ತಿದ್ದದ್ದು ತಿಳಿದು ಬಂದಿದ್ದರಿಂದ ಬಾಲಕಿಯನ್ನು ಸುರಕ್ಷಿತವಾಗಿ ಇಬ್ಬರು ವ್ಯಕ್ತಿಗಳು ಮನೆಯ ಮುಂದೆ ಬಿಟ್ಟು ಹೋಗಿದ್ದಾರೆ.
ಅಣ್ಣ- ತಂಗಿ ಇಬ್ಬರೂ ಟ್ಯೂಷನ್ಗೆ ಹೋಗಿ ವಾಪಸ್ ಬರುತ್ತಿರುವ ಸಮಯದಲ್ಲಿ ಅವರಿಬ್ಬರನ್ನು ಅಪಹರಣಕಾರರು ಅಡ್ಡಗಟ್ಟಿದ್ದಾರೆ. ನಂತರ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಆಕೆಯ ಅಣ್ಣ ಓಂ ಎಂಬುವವನು ಅವರ ಕಾಲು ಹಿಡಿದಿದ್ದಾನೆ. ಆಗ ಅವರು ಹುಡುಗನಿಗೆ ಕಾಲಿನಿಂದ ಒದ್ದು ಹೋಗಿದ್ದಾರೆ ಎನ್ನಲಾಗಿದೆ.
ಆಹಾರ ಕೊಡದೆ ತೊಂದರೆ
ಚಾಕೊಲೇಟ್ ಆಸೆ ತೋರಿಸಿ, ಮನೆಯ ಮಾಹಿತಿ ಕೇಳುವ ನೆಪದಲ್ಲಿ ಅಪಹರಣ ಮಾಡಿದ್ದಾರೆ. ಬಾಲಕಿಗೆ ರಾತ್ರಿ ಇಡೀ ಬೇರೆ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ಆಹಾರ ಕೊಡದೆ ತೊಂದರೆ ಮಾಡಿದ್ದಾರೆ. ಮತ್ತೆ ಅವಾಜ್ ಹಾಕಿದ್ದಾರೆ ಎಂದು ಬಾಲಕಿ ಪೊಲೀಸರ ಮುಂದೆ ತಿಳಿಸಿದ್ದಾಳೆ.