ಬಾಗಲಕೋಟೆ:ಲೋಕಸಭಾ ಚುನಾವಣೆ ಹಿನ್ನಲೆ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಫ್ ವತಿಯಿಂದ ಕಬ್ಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.
ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಗ್ರಾಮದಲ್ಲಿ ಪಿಡಿಓ ನೇತೃತ್ವದಲ್ಲಿ ಆಟ ಆಡಿ ನೋಡಿ-ಮತ ಚಲಾಯಿಸಿ ನೋಡಿ, ನಮ್ಮ ನಡೆ ಮತಗಟ್ಟೆ ಕಡೆಗೆ ಎಂದು ಹೊನಲು ಬೆಳಕಿನ 60 ಕೆ.ಜಿ. ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಸಮಾರಂಭಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಗಂಗೂಬಾಯಿ ಮಾನಕರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕು ಇದೆ. ಹೀಗಾಗಿ 18 ವರ್ಷದ ಮೇಲ್ಪಟ್ಟ ಯುವಕ,ಯುವತಿಯರು ಆಲಸ್ಯ ಮಾಡದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ಪ್ರವಚನ ನೀಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಬಾಗಲಕೋಟೆ-ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಸುಮಾರು 20 ತಂಡಗಳು ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನವಾಗಿ 10,001 ರೂ. ದ್ವೀತಿಯ ಬಹುಮಾನ-7,501ರೂ., ತೃತೀಯ ಬಹುಮಾನ-5,001 ರೂ. ಹಾಗೂ ನಾಲ್ಕನೇ ಬಹುಮಾನ 3,501 ರೂ. ನೀಡಲಾಯಿತು.