ಬಾಗಲಕೋಟೆ:ಉತ್ತರ ಕರ್ನಾಟಕ ಭಾಗದಲ್ಲಿ ಜೋಕುಮಾರಸ್ವಾಮಿ ಹಬ್ಬವನ್ನು ತಳವಾರ ಸಮುದಾಯ ಇಂದಿಗೂ ಆಚರಣೆ ಮಾಡಲಾಗುತ್ತೆ.
ಗಣೇಶ ಹೋದ,ಜೋಕುಮಾರ ಬಂದ..ಉತ್ತರ ಕರ್ನಾಟಕದಲ್ಲಿ ಜೋಕುಮಾರನ ಹಬ್ಬ ಆಚರಣೆ - bagalakotejokumarafestival
ಉತ್ತರ ಕರ್ನಾಟಕ ಭಾಗದಲ್ಲಿ ಜೋಕುಮಾರಸ್ವಾಮಿ ಹಬ್ಬವನ್ನು ತಳವಾರ ಸಮುದಾಯ ಇಂದಿಗೂ ಆಚರಣೆ ಮಾಡುತ್ತಾ ಬಂದಿದೆ.
ಭಾದ್ರಪದ ಮಾಸದ ಅಷ್ಟಮಿಯಂದು ಹುಟ್ಟುವ ಜೋಕುಮಾರ ಜೋ ಎಂಬ ಮುನಿಯ ಮಗನು, ಜೇಷ್ಠಾ ದೇವಿಯ ಮಗನೆಂದು ಹೇಳಲಾಗುತ್ತಿದೆ. ಗಣಪ ಕುಳಿತು ತಿಂದು ಉಂಡು ಹೋದರೆ ಜೋಕುಮಾರ ಮಾತ್ರ ಭೂಮಂಡಲದಲ್ಲಿ ಓಣಿ ಓಣಿಗೂ ಸುತ್ತಾಡಿ, ಮಳೆ ಬೆಳೆ ಇಲ್ಲದೇ ಕಂಗಾಲಾಗಿರುವುದನ್ನು ಕಂಡು ಶಿವನಿಗೆ ವರದಿ ಒಪ್ಪಿಸಿ ಮಳೆ ತರುತ್ತಾನೆ ಎಂಬ ಪ್ರತೀತಿಯೂ ಇದೆ.ಕುಂಬಾರ ಮನೆಯಲ್ಲಿ ಜನಿಸಿ, ತಳವಾರ ಮನೆಯಲ್ಲಿ ಮೆರದಾಡಿ, ಕೇರ್ಯಾನವರ ಮನೆಯಲ್ಲಿ ಜಿಗಿದಾಡಿ ಕೊನೆಗೆ ದಾಸರ ಪಡಿಯಲ್ಲಿ ಮರಣ ಹೊಂದುತ್ತಾನೆ ಎಂಬುದು ಮೊದಲಿನಿಂದ ಜಾರಿಯಲ್ಲಿದ್ದ ಪದ್ದತಿಯಾಗಿದೆ. ಗಣಪತಿ ಕುಳಿತ 4ನೇದಿನಕ್ಕೆ ಜೋಕುಮಾರ ಜನಿಸುತ್ತಾನೆ. ನಂತರ ಅವನಿಗೆ ಬೆಣ್ಣೆ, ಬೇವಿನ ತಪ್ಪಲದಿಂದ ಸಿಂಗರಿಸಿ ಬಿದರಿನ ಬುಟ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಗಲ್ಲಿ ಗಲ್ಲಿ ಮನೆ ಮನೆ ತಿರುಗಾಡುತ್ತಾರೆ. ಜೋಕುಮಾರನಿಗೆ ಗೋದಿ, ಜೋಳ, ಸಜ್ಜಿ ಹಣ ಸೇರಿದಂತೆ ಅನೇಕ ಪದಾರ್ಥಗಳನ್ನು ಜನ ನೀಡುತ್ತಾರೆ. ಬಂದ ದಾನ್ಯಗಳಲ್ಲಿ ಕುಂಬಾರರು, ಕೇರಿಯ ಜನರು ಸೇರಿ ಮೂರು ಪಾಲು ಹಂಚಿಕೊಳ್ಳುತ್ತಾರೆ.
7 ದಿನಗಳ ವರೆಗೆ ನಗರದಲ್ಲಿ ತಿರುಗಾಡಿ 7ನೇ ರಾತ್ರಿ ಎಲ್ಲ ಜನ ಮಲಗಿದ ಮೇಲೆ ಕೇರಿಯಲ್ಲಿನ ದೇವಿಗುಡಿ ಕಟ್ಟೆಮೇಲೆ ಇಟ್ಟು ಬರುತ್ತಾರೆ. ನಂತರ ಕೇರಿಯ ಜನ ಜೋಕುಮಾರನ ಮೂರ್ತಿ ಮೇಲೆ ಬಾರಿಗಿಡದ ಕಂಟಿಯಿಂದ ಮುಚ್ಚಿ ಆತನ ಸುತ್ತಲೂ ಸುತ್ತುತ್ತಾರೆ. ಸುತ್ತುವಾಗ ಬಾರಿ ಕಂಟಿಗೆ ಸೀರೆ ಸಿಲುಕಿದಾಗ ಜೋಕುಮಾರ ಜಗ್ಗಿದಾ ಎಂದು ಭಾವಿಸಿ ಕಲ್ಲಿನಿಂದ, ಒಣಕೆಯಿಂದ ಜಡಿದು ತಲೆ ಬುರುಡೆ ಒಡೆಯುವುದು ವಾಡಿಕೆ. ನಂತರ ದಾಸರ ಪಡಿಯಲ್ಲಿ ಒಡೆದ ಮೂರ್ತಿ ಧಫನ್ ಮಾಡುತ್ತಾರೆ. ಮರುದಿನ ದಾಸರು(ಅಗಸರು) ಜೋಕುಮಾರನ ದಿನದ (ತಿಥಿ) ಕಾರ್ಯದ ಸಿಹಿ ಊಟ ಮಾಡಿ ಹಬ್ಬ ಮುಗಿಸುತ್ತಾರೆ. ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತ ಚಲುವಿ ತನ್ನ ಮಡದಿಯಾಗೆಂದ ಜೋಕುಮಾರ' ಎಂದು ಗುಂಪಾಗಿ ತಳವಾರ ಸಮುದಾಯದ ಮಹಿಳೆಯರು ಹಾಡು ಹಾಡುತ್ತಾರೆ.