ಸಂಘಟನೆ ಬ್ಯಾನ್ ಮುಂಚೆ ಅದರ ಮೂಲ ಕಂಡು ಹಿಡಿದು ತಡೆಯುವ ಅಗತ್ಯವಿದೆ- ಹೆಚ್‌ಡಿಕೆ ಬಾಗಲಕೋಟೆ : ಚುನಾವಣೆಯಲ್ಲಿ ಪ್ರಚಾರದಲ್ಲಿ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡದೆ ಸಂಘಟನೆ ಬ್ಯಾನ್ ಮಾಡುವಂತಹ ಚರ್ಚೆ ಆಗುವುದು ಸೂಕ್ತವಲ್ಲ, ಸಂಘಟನೆ ಬ್ಯಾನ್ ಮುಂಚೆ ಅದರ ಮೂಲ ಕಂಡು ಹಿಡಿದು ತಡೆಯುವುದು ಅಗತ್ಯವಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಬಾಗಲಕೋಟೆ ನಗರಕ್ಕೆ ಜೆಡಿಎಸ್ ಪ್ರಚಾರಕ್ಕೆ ಆಗಮಿಸಿದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾವು ಅಧಿಕಾರಕ್ಕೆ ಬಂದರೇ ಬಜರಂಗ ದಳ ಬ್ಯಾನ್, ಪಿಎಫ್‌ಐ ಬ್ಯಾನ್ ಮಾಡುತ್ತೇವೆ ಎಂದು ಹೇಳುವವರು ಬ್ಯಾನ್ ಮಾಡಿದ ತಕ್ಷಣ ಏನ್ ಆಗುತ್ತದೆ ಎಂದು ಯೋಚಿಸಿದ್ದೀರಾ? ಆ ಬಜರಂಗ ದಳಕ್ಕೆ ಅಮಾಯಕ ಯುವಕರನ್ನು ಸದಸ್ಯರ ಮಾಡಿ ದಾರಿ ತಪ್ಪಿಸುವಂತಹ ಮೂಲ ಇದೆಯಲ್ಲಾ ಆ ಮೂಲ ಹಿಡಿಬೇಕು. ಪಾಪ ಅಮಾಯಕ ಹುಡುಗರನ್ನು ಉಪಯೋಗ ಮಾಡಿಕೊಂಡು ಆ ಸಂಘಟನೆ ಅಂತೇಳಿ ಹೆಸರು ಇಟ್ಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಇದೇ ಸಮಯದಲ್ಲಿ ಚಿತ್ರ ನಟರು ಪ್ರಚಾರದಲ್ಲಿ ತೋಡಗಿರೊ ವಿಚಾರವಾಗಿ ಮಾತನಾಡಿದ ಹೆಚ್‌ಡಿಕೆ, ಚಿತ್ರ ನಟರ ಬಗ್ಗೆ ನಾನೇನ ಚರ್ಚೆ ಮಾಡಲಿ. ನಟರ ಬಗ್ಗೆ ಚರ್ಚೆ ಬೇಡ, ಪಾಪ ಅವರು ಅವರದ್ದೇ ಆದ ವಿಶ್ವಾಸ ಇಟ್ಟುಕೊಂಡಿದ್ದಾರೆ. ಆ ವಿಶ್ವಾಸದ ಮೇಲೆ ಪ್ರಚಾರಕ್ಕೆ ಹೋಗುತ್ತಾರೆ. ಸಂಕಷ್ಟ ಇದ್ದಾಗ ನಟರು ಬರೋದಿಲ್ಲ ಎಂಬ ಪ್ರಶ್ನೆ, ಅದನ್ನ ಜನಾನೇ ತೀರ್ಮಾನ ಮಾಡಬೇಕು ಎಂದು ಹೇಳಿದರು.
ಮುನಿಗೌಡ ತಮ್ಮನ್ನೇ ತಾವೇ ಕಿಡ್ನಾಪ್ ಮಾಡಿಕೊಳ್ಳುತ್ತಿದ್ದಾರೆ ಎಂದ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರಂತಹ ಒಬ್ಬ ರೌಡಿ ಶಾಸಕ ಮತ್ತೊಬ್ಬ ಇದ್ದಾನಾ ? ಎಷ್ಟ ವಿಡಿಯೋ ಇವತ್ತು ಪೊಲೀಸ್ ಠಾಣೆಗೆ ದಾಖಲೆ ಕೊಟ್ಟಿದ್ದಿವಿ. ಕ್ಯಾಂಪೇನ್ ಮಾಡಲು ಹೋಗುವ ಹೆಣ್ಣು ಮಕ್ಕಳ ಮೇಲೆ ರೌಡಿಗಳನ್ನು ಬಿಟ್ಟು ಹೆದರಿಸುವಂತಹ ಗೂಂಡಾ ಸಂಸ್ಕೃತಿ ರಾಜಕಾರಣಿ. ಚುನಾವಣೆ ಮುಂಚೆ ಅವರನ್ನ ಮುಗಿಸೇ ಬಿಡುತ್ತೇನೆ ಅಂತೇಳಿ ಮಾತಾಡಿರುವಂತಹದ್ದು ಈಗಾಗಲೇ ಪ್ರಚಾರ ಆಗಿದೆ. ಅವರು ಯಾವ ರೀತಿ ಬಂದಿದ್ದಾರೆ ಅನ್ನೋದು ಗೊತ್ತಿದೆ. ಆ ಗೂಂಡಾ ಸಂಸ್ಕೃತಿಗೆ ಅಂತಿಮ ತೆರೆ ಎಳೆಬೇಕು ಅಂತಲೇ ಈ ಬಾರಿ ಮುನಿಗೌಡ ಅಂತಹ ಉತ್ತಮ ಅಭ್ಯರ್ಥಿ ಹಾಕಿದ್ದೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.
ಚುನಾವಣೆಯಲ್ಲಿ ಯಾರ ಜೊತೆಗೆ ಕೈಜೋಡಿಸಲ್ಲ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಯಾರ ಜೋತೆಗಾದರೂ ಕೈ ಜೋಡಿಸುತ್ತೇನೆ ಎಂದು ಹೇಳಿದ್ದೇನಾ? ನಾವು ಸ್ವತಂತ್ರವಾಗಿ 123 ಸ್ಥಾನ ಕೊಡಿ ಅಂತ ಕೇಳುತ್ತಿದ್ದೇವೆ. ಸ್ಪಷ್ಟಬಹುಮತ ಬಂದು ಸರ್ಕಾರ ರಚನೆ ಮಾಡುತ್ತೇವೆ ಎಂದ ಹೆಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ನಂತರ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ದೇವರಾಜ ಪಾಟೀಲ ಅವರ ಪರವಾಗಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಸಾಮಾನ್ಯರು ಸರ್ಕಾರಕ್ಕೆ ಕಟ್ಟುತ್ತಿರುವ ತೆರಿಗೆ ಹಣ ಜನತೆ ಕಲ್ಯಾಣಕ್ಕೆ ಬಳಕೆಯಾಗದೆ ಶ್ರೀಮಂತರ ಪಾಲಾಗುತ್ತಿದೆ. ಇದನ್ನು ತಡೆಯಲು ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕು ಎಂದರು.
ಬಾಗಲಕೋಟೆ ಜಿಲ್ಲೆಯ ಜನತೆ ಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಇಲ್ಲಿನ ಹಿರಿಯರ ಆಶೀರ್ವಾದ ಪಡೆಯಲು ಈ ಸಭೆಯಲ್ಲಿ ಭಾಗವಹಿಸಿದ್ದೇನೆ. ನಾನು ಯಾರನ್ನೂ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ. ಐದು ವರ್ಷ ಸುಮ್ಮನೆ ಕುಳಿತ ಕೆಲವು ರಾಜಕಾರಣಿಗಳು ಪಿಎಫ್‌ಐ ಮತ್ತು ಬಜರಂಗದಳ ಸಂಘಟನೆ ಬ್ಯಾನ್ ಮಾಡುವುದಾಗಿ ಸದ್ಯ ಹೇಳುತ್ತಿದ್ದಾರೆ. ಈ ಭರವಸೆ ಹಿಂದೆ ರಾಜಕೀಯ ಸ್ವಾರ್ಥ ಅಡಗಿದೆ. ಮೊದಲು ಇಂಥ ರಾಜಕಾರಣಿಗಳನ್ನು ಬ್ಯಾನ್ ಮಾಡಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಅವರಿಗೆ ಟಾಂಗ್ ಕೊಟ್ಟರು.
ನಮ್ಮ ಸರ್ಕಾರ ರಚನೆಯಾದಲ್ಲಿ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಿ ಜನರ ಹಿತ ಕಾಪಾಡಲಾಗುವುದು. ಈ ಯೋಜನೆಗಳಲ್ಲಿ ಸಮಾಜದ ಎಲ್ಲ ವರ್ಗದವರ ಹಿತ ಅಡಗಿದೆ. ಅಕಸ್ಮಾತ್ ಪಂಚರತ್ನ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾದರೆ ಪಕ್ಷವನ್ನು ವಿಸರ್ಜಿಸಲಾಗುವುದು ಎಂದು ಹೆಚ್‌ಡಿಕೆ ಭರವಸೆ ನೀಡಿದರು.
ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಅಗತ್ಯ ಹಣಕಾಸು ಸೌಲಭ್ಯ ನೀಡಿದ್ದರು. ಇದರಿಂದ ಕಾಮಗಾರಿ ಚುರುಕುಗೊಂಡಿದ್ದವು. ಆದರೆ ಮುಂದೆ ಬಂದ ಸರ್ಕಾರಗಳ ಇಚ್ಛಾಶಕ್ತಿಯಿಂದ ಯೋಜನೆ ಪೂರ್ಣಗೊಂಡಿಲ್ಲ. ಮುಂದಿನ ದಿನಗಳಲ್ಲಿ ಯೋಜನೆ ಪೂರ್ಣಗೊಳಿಸಿ ಆಲಮಟ್ಟಿ ಜಲಾಶಯವನ್ನು 524 ಮೀಟರ್‌ಗೆ ಎತ್ತರಿಸಿ 130 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಂಡು ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೆಚ್‌ಡಿಕೆ ಅಭಯ ನೀಡಿದರು.
ಬಳಿಕ ಜೆಡಿಎಸ್ ಅಭ್ಯರ್ಥಿ ಡಾ.ದೇವರಾಜ ಪಾಟೀಲ ಮಾತನಾಡಿ, ಜನರ ಸೇವೆಯ ಸಂಕಲ್ಪ ದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಜೆಡಿಎಸ್ ಬೆಂಬಲಿಸುವ ಮೂಲಕ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದರು. ಬಾದಾಮಿ ವಿಧಾನಸಭೆ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಣಮಂತ ಮಾವಿನಮರದ, ಮುಖಂಡರಾದ ಶ್ರೀನಿವಾಸ ಗೌಡರ ಅವರ ಸಮ್ಮುಖದಲ್ಲಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಾಕೀರ್ ಮೊಕಾಶಿ, ರಜಾಕ್ ಹಳ್ಳೂರ, ಅಕ್ರಮ್ ಸೌದಾಗರ, ಶಬ್ಬೀರ್ ಅಹಮದ್ ಜಮಾದಾರ, ರಫೀಕ್ ಜಮಾದಾರ ಸೇರಿದಂತೆ ನೂರಾರು ಮಂದಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಇದನ್ನೂ ಓದಿ :ದಲಿತ ನಾಯಕ ಖರ್ಗೆ ಸಾವು ಬಯಸಿದ ನಿಮ್ಮ ಶಾಸಕನ ವಿರುದ್ಧ ಕ್ರಮವಿಲ್ಲವೇ?: ಮೋದಿಗೆ ಸುರ್ಜೇವಾಲಾ ಪ್ರಶ್ನೆ