ಬಾಗಲಕೋಟೆ: ಜಮಖಂಡಿ ಪಟ್ಟಣದಲ್ಲಿ ಅಕ್ರಮವಾಗಿ ಸಂಗ್ರಹಿಸಿದ 980 ಕೆಜಿ ತೂಕದ 2.5 ಲಕ್ಷಕ್ಕೂ ಅಧಿಕ ಮೊತ್ತದ ಕ್ಷೀರ ಭಾಗ್ಯ ಯೋಜನೆಯ ನಂದಿನಿ ಹಾಲಿನ ಪೌಡರ್ ಪೊಟ್ಟಣಗಳನ್ನು ವಶಕ್ಕೆ ಪಡೆಯಲಾಯಿತು.
ನಗರದ ಮೋಮಿನ ಗಲ್ಲಿಯ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.
ನಂದಿನಿ ಹಾಲಿನ ಪೌಡರ್ ಅಕ್ರಮ ದಾಸ್ತಾನು ವಶ ಶಾಲಾ ಮಕ್ಕಳಿಗೆ ವಿತರಿಸಬೇಕಿದ್ದ ಅರ್ಧ ಕೆ.ಜಿ. ತೂಕದ 542 ಹಾಗೂ 1 ಕೆಜಿ ತೂಕದ 59 ಹಾಲಿನ ಪೌಡರ್ ಪ್ಯಾಕೇಟ್ಗಳು, 25 ರಿಂದ 30 ಕೆಜಿಯ 24 ಚೀಲಗಳಲ್ಲಿ ಸಂಗ್ರಹಿಸಲಾಗಿತ್ತು.
ಆರೋಪಿ ಆಯಿಶಾ ಟಿನಮೇಕರ, ಮುಬಾರಕ ಅವಟಿ, ಇಸ್ಮಾಯಿಲ ಅವಟಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಠಾಣೆಯ ಎಎಸ್‌ಐ ಬಿ.ಐ. ಗೋರೆಖಾನ ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಐನಾಪೂರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ಆನಂದ, ಪೊಲೀಸ ಸಿಬ್ಬಂದಿಗಳಾದ ಸುಭಾಶ ಹಾದರಗಿ, ಮಲ್ಲು ಕೋಲಾರ, ಶಿವಾನಂದ ರಾಠೋಡ ಇದ್ದರು.