ಬಾಗಲಕೋಟೆ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಪ್ರಾರ್ಥನೆ, ಉಪವಾಸ ಹಾಗು ಇಫ್ತಾರ್ ಕೂಟದಲ್ಲಿ ಹಿಂದೂಗಳೂ ಸೇರಿಕೊಂಡು ಭಾವೈಕ್ಯತೆ ಮೆರೆದರು. ಒಂದು ತಿಂಗಳ ಕಾಲ ಉಪವಾಸ ನಡೆಯಲಿದ್ದು ಬಾಗಲಕೋಟೆಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ನವನಗರದ ಈದ್ಗಾ ಪ್ರಾರ್ಥನಾ ಮಂದಿರದಲ್ಲಿ ನಡೆದ ಕೂಟದಲ್ಲಿ ಉಭಯ ಸಮುದಾಯದ ಜನರು ಸೇರಿದ್ದರು.
ಇಫ್ತಾರ್ ಆರಂಭಕ್ಕೂ ಮುನ್ನ ಸ್ಥಳೀಯ ಈದ್ಗಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ರೋಜಾ ನಿಮಿತ್ತ ಉಪವಾಸವಿದ್ದು ಬಂದು ಇಲ್ಲಿ ಪ್ರಾರ್ಥನೆ ಸಲ್ಲಿಸಿ, ಆಹಾರ ಸೇವನೆ ಮಾಡುತ್ತಾರೆ. ನಂತರ ಉಪವಾಸ ಬಿಡುತ್ತಾರೆ. ಈ ರೋಜಾ ಆಚರಣೆ ಹೇಗೆ ನಡೆಯುತ್ತದೆ, ಪ್ರಾರ್ಥನೆ ಸಲ್ಲಿಸುವ ಬಗೆ ಹೇಗೆ ಎಂಬುದನ್ನು ಹಿಂದೂ ಸಮುದಾಯವರಿಗೆ ತಿಳಿಸುವ ದೃಷ್ಟಿಯಿಂದ ಹಾಗೂ ಸಾಮೂಹಿಕ ಪ್ರಾರ್ಥನೆ ಮಾಡುವ ಜೊತೆಗೆ ಉಪವಾಸ ಲಾಭಗಳನ್ನು ಮುಸ್ಲಿಂ ಧಾರ್ಮಿಕ ಗುರುಗಳು ಪ್ರವಚನ ನೀಡುತ್ತಾರೆ.