ಬಾಗಲಕೋಟೆ:ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಬೇಡಿದಷ್ಟು ಹಣ ಕೊಡ್ತೀವಿ. ಈ ಹಿಂದೆಯೂ ಸಾಕಷ್ಟು ಕೆಲಸ ಮಾಡಿದ್ದೇವೆ. ನೇಕಾರರಿಗೆ ಅನುಕೂಲ ಮಾಡಿದ್ದೇವೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ ಸೇರಿ ಎಲ್ಲ ಜಾತಿಗಳಿಗೂ ಅನುಕೂಲ ಮಾಡಬೇಕು. ಎಲ್ಲರನ್ನೂ ಒಂದೇ ರೀತಿ ನೋಡುವಂತಾಗಬೇಕು ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಪರೋಕ್ಷವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯ ಹುನಗುಂದ ತಾಲೂಕಿನ ಸೂಳೇಬಾವಿ ಗ್ರಾಮದಲ್ಲಿ ಗಾಯತ್ರಿ ಪತ್ತಿನ ಸಹಕಾರಿ ಸಂಘದ ಬೆಳ್ಳಿಯ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಸಿದ್ದರಾಮಯ್ಯ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮಪ್ಪ ಕುರುಬ, ನಾನು ಕುರುಬ ಆಗಿದ್ದೀನಿ. ವಿಜಯಾನಂದಕಾಶಪ್ಪನವರು ಪಂಚಮಸಾಲಿ ಜಾತಿಯವರಾಗಿದ್ದಾರೆ. ಯಾರೂ ಸಹ ಇದೇ ಜಾತಿಯಲ್ಲಿ ಹುಟ್ಟುತ್ತೀನಿ ಎಂದು ಅರ್ಜಿ ಹಾಕಿರೋದಿಲ್ಲ. ಎಲ್ಲರೂ ವಿಶ್ವ ಮಾನವರಾಗಿಯೇ ಹುಟ್ಟಬೇಕು, ವಿಶ್ವ ಮಾನವರಾಗಿಯೇ ಸಾಯಬೇಕು. ಎಲ್ಲಿ ಸಾಮರಸ್ಯ ಇರೋದಿಲ್ವೋ ಆ ನಾಡು ಯಾವತ್ತು ಬೆಳೆಯೋದಿಲ್ಲ ಎಂದು ಅವರು ಹೇಳಿದ್ದಾರೆ.