ಕರ್ನಾಟಕ

karnataka

ETV Bharat / state

ಬೇಡಿಕೆ ಪೂರೈಸದಿದ್ದರೆ ಮನೆ ಮುಂದೆ ಧರಣಿ ಕೂರುತ್ತೇವೆ: ಪಂಚಮಸಾಲಿ ಶ್ರೀಗಳ ಎಚ್ಚರಿಕೆ - kannada top news

ಪಂಚಮಸಾಲಿ ನಡಿಗೆ ಶಿಗ್ಗಾಂವಿ ಕಡೆಗೆ- ಮೀಸಲಾತಿ ಅಧಿಸೂಚನೆ ಹೊರಡಿಸದೇ ಇದ್ದಲ್ಲಿ ಮನೆಯ ಮುಂದೆ ಹೋರಾಟ- ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ಒಂದು ವಾರ ಗಡುವು.

if-the-demand-is-not-met-we-will-sit-in-front-of-the-house-panchamasali-shri-warned
ಬೇಡಿಕೆ ಪೂರೈಸದಿದ್ದರೆ ಮನೆ ಮುಂದೆ ಧರಣಿ ಕೂರುತ್ತೇವೆ: ಪಂಚಮಸಾಲಿ ಶ್ರೀಗಳ ಎಚ್ಚರಿಕೆ

By

Published : Jan 8, 2023, 11:07 PM IST

ಬೇಡಿಕೆ ಪೂರೈಸದಿದ್ದರೆ ಮನೆ ಮುಂದೆ ಧರಣಿ ಕೂರುತ್ತೇವೆ: ಪಂಚಮಸಾಲಿ ಶ್ರೀಗಳ ಎಚ್ಚರಿಕೆ

ಬಾಗಲಕೋಟೆ: ಜನವರಿ 12ರ ಒಳಗಾಗಿ ಸಂಪೂರ್ಣ 2ಎ ಮೀಸಲಾತಿ ಪ್ರಕಟಿಸಿ ಗೆಜೆಟ್ ನೋಟಿಫಿಕೇಶನ್ ​ಹೊರಡಿಸಬೇಕು, ಇಲ್ಲವಾದಲ್ಲಿ ಜನವರಿ 13 ರಂದು ಮುಖ್ಯಮಂತ್ರಿಗಳ ಮನೆಯ ಎದುರು ಹೋರಾಟ ಮಾಡುವುದಾಗಿ, ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ಒಂದು ವಾರ ಗಡುವು‌ ನೀಡಿ, ಶ್ರೀಗಳು ಜನವರಿ 12ರ ಒಳಗಾಗಿ ಸಂಪೂರ್ಣ 2ಎ ಮೀಸಲಾತಿ ಪ್ರಕಟಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸದೆ ಇಲ್ಲವಾದಲ್ಲಿ, ಮುಖ್ಯಮಂತ್ರಿಗಳ ತವರು ತಾಲೂಕು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿರುವ ತಮ್ಮ ಸ್ವ ಗೃಹದ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.

ರಾಜ್ಯದ ಪಂಚಮಸಾಲಿ‌ ಸಮಾಜದ ಬಾಂಧವರು ರೊಟ್ಟಿ ಬುತ್ತಿ ಕಟ್ಟಿಕೊಂಡು ಬಂದು ಧರಣಿಯಲ್ಲಿ ಭಾಗವಹಿಸುತ್ತೇವೆ. ಸಿಎಂ ಅವರು ಬೆಳಗಾವಿ ಅದಿವೇಶನದಲ್ಲಿ ಕೊಟ್ಟ ಮಾತು ತಪ್ಪಿದ್ದಾರೆ. ತಾಯಿಯ ಮೇಲೆ ಆಣೆ ಮಾಡಿ ಮಾತು ತಪ್ಪಿದ್ದಾರೆ. ಈಗಾಗಲೇ ಅವರು ಹೇಳಿರುವ 2ಡಿ ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ, 2ಡಿ ಮೀಸಲಾತಿಯು ಗೊಂದಲ‌ ಉಂಟು ಮಾಡಿದೆ. ನಮಗೆ ಸಂಪೂರ್ಣ 2ಎ ಮೀಸಲಾತಿ ಬೇಕು, ಅದರಲ್ಲಿ ಇರುವ 102 ಸಮಾಜಕ್ಕೆ ಸಿಗುವಂತಹದ ಸೌಲಭ್ಯಗಳು ಪಂಚಮಸಾಲಿ ಸಮಾಜಕ್ಕೂ ಸಿಗಬೇಕು ಎಂದು ಶ್ರೀಗಳು ಬೇಡಿಕೆ ಇಟ್ಟರು.

ಆರು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ: ಮಾನ್ಯ ಮುಖ್ಯಮಂತ್ರಿಗಳು ಮೀಸಲಾತಿ ವಿಚಾರವಾಗಿ 2ಎ ಮೀಸಲಾತಿ ಕೊಡುತ್ತೇವೆ ಎಂದು ಆರು ಬಾರಿ ಮಾತು ಕೊಟ್ಟಿದ್ದಾರೆ. ಆದರೆ, ಮಾತು ಕೊಟ್ಟ ಹಾಗೆ ಅವರು ನಡೆದುಕೊಂಡಿಲ್ಲ, ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇಬೇಕಾಗಿದೆ. ನಮ್ಮ ಸಮಾಜದ ಬಡ ಮಕ್ಕಳ ಕಣ್ಣಿರು ಒರೆಸಲು ನಾವು ಹೋರಾಟ ಮಾಡಬೇಕಿದೆ, ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ. ನ್ಯಾಯ ಸಿಗದೆ ಇದ್ದರೆ 2023ರ ಚುನಾವಣೆಯಲ್ಲಿ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿಗಳು ಕಾದು ನೋಡಬೇಕಿದೆ ಎಂದು ಹೇಳಿದರು.

ತಲೆಗೆ ತುಪ್ಪ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ: ಮೀಸಲಾತಿ ಹೋರಾಟಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಸರ್ಕಾರ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ಸರ್ಕಾರದವರು ಏನು ಪ್ಲಾನ್ ಮಾಡಿದ್ದಾರೆ ಎಂದರೆ, ಇದೇ ರೀತಿ ಮೀಸಲಾತಿ ವಿಚಾರವನ್ನು ಮುಂದೆ ತಳ್ಳುತ್ತಾ ಹೋದರೆ. ಚುನಾವಣಾ ನೀತಿಸಂಹಿತೆ ಬರುತ್ತದೆ ಆಗ ಈ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳುವ ಹಾಗಿಲ್ಲ. ಈಗಾಗಲೇ ಮೂಗಿಗೆ ತುಪ್ಪ ಹಚ್ಚಿದಾರೆ. ಈಗ ತಲೆಗೆ ತುಪ್ಪ ಹಚ್ಚುವ ಪ್ರಯತ್ನವನ್ನು ಕಾಣದ ಶಕ್ತಿಗಳು ಮಾಡುತ್ತಿವೆ ಎಂದು ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಆರೋಪಿಸಿದರು.

ಸಮಾಜದವರೇ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ: ಕಳೆದ ಒಂದು ವಾರದಿಂದ ಮೀಸಲಾತಿ ಹೋರಾಟವನ್ನು ಮುಚ್ಚಿ ಹಾಕಲು, ಬ್ರಿಟಿಷ್​ ಪಾಲಿಸಿ ತಂದು ಕೂರಿಸಬೇಕು ಎಂದು ಕೆಲ ಕುತಂತ್ರಿಗಳು, ದುಷ್ಟಶಕ್ತಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಆರೋಪ ಮಾಡಿದರು. ಆ ದುಷ್ಟಶಕ್ತಿಗಳ, ಕುತಂತ್ರಿಗಳ ಎಲ್ಲ ಒಳ ಮರ್ಮವನ್ನು ಶಿಗ್ಗಾವಿಯಲ್ಲಿ ಚರ್ಚೆ ಮಾಡುತ್ತೇವೆ. ಸಮಾಜದ ಬಾಂಧವರು ಕುತಂತ್ರಿಗಳ ಯಾವುದೇ ಮಾತನ್ನು ಕೇಳಬಾರದು. ಅವರ ಆಸೆ ಆಮಿಷ ಒಡೆದಾಳುವ ತಂತ್ರಕ್ಕೆ ಒಳಗಾಗಬಾರದು, ಪಂಚಮಸಾಲಿ ನಡಿಗೆ ಶಿಗ್ಗಾಂವಿ ಕಡೆಗೆ ಘೋಷವಾಕ್ಯದೊಂದಿಗೆ ಸಮಾಜದವರು ಶಿಗ್ಗಾಂವಿಗೆ ಬರಬೇಕು ಎಂದು ಶ್ರೀಗಳು ಮನವಿ ಮಾಡಿದರು.

ಇದನ್ನೂ ಓದಿ:ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ : ಅನ್ಯಕೋಮಿನ ಯುವಕರಿಂದ ಹಲ್ಲೆ, ನಾಲ್ವರು ಆಸ್ಪತ್ರೆಗೆ ದಾಖಲು

ABOUT THE AUTHOR

...view details