ಬಾಗಲಕೋಟೆ: ಆರ್‌ಎಸ್‌ಎಸ್ ಬಗ್ಗೆ ಡಿಕೆಶಿ, ಸಿದ್ದುಗೆ ಯಾಕಿಷ್ಟು ಗಡಿಬಿಡಿ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ವಾಯವ್ಯ ಶಿಕ್ಷಕರ ಹಾಗೂ ಪದವೀಧರ ವಿಧಾನ ಪರಿಷತ್ ಚುನಾವಣಾ ಪ್ರಚಾರ ಅಂಗವಾಗಿ ಬಾಗಲಕೋಟೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನೆಹರು ಪ್ರಧಾನಿಯಾಗಿದ್ದಾಗ ಆರ್‌ಎಸ್‌ಎಸ್‌ಗೆ ಪಥಸಂಚಲನಕ್ಕೆ ಅವಕಾಶ ನೀಡಿದ್ದರು.
ನೆಹರೂಗಿಂತ ಸಿದ್ದು, ಡಿಕೆಶಿಯವರೇನು ದೊಡ್ಡವರೇ ?.ಅಲ್ಲದೆ ಪ್ರಣಬ್ ಮುಖರ್ಜಿ ನಾಗಪುರದ ಆರ್‌ಎಸ್‌ಎಸ್ ಕಚೇರಿಗೆ ಆಗಮಿಸಿ ಇದೊಂದು ರಾಷ್ಟ್ರಭಕ್ತ ಸಂಘಟನೆ ಎಂದು ಹೇಳಿದ್ದರು. ಈ ಬಗ್ಗೆ ಗೊತ್ತಿಲ್ಲದಿದ್ದರೆ ಇವರು ಒಮ್ಮೆ ಹಿಂದಿನ ಇತಿಹಾಸ ಓದಲಿ. ಅದು ಬಿಟ್ಟು ಚಡ್ಡಿ ಸುಡುವ ವಿಚಾರದಲ್ಲಿ ಇವರಿಗೆ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.
ಆರ್‌ಎಸ್‌ಎಸ್‌ನ ಸೈದ್ಧಾಂತಿಕ ವಿಚಾರದಲ್ಲಿ ಅವರ ಉಡುಪು, ಸಮವಸ್ತ್ರ ಸುಡುತ್ತೇವೆ ಎಂದು ಹೇಳುತ್ತಿರುವುದು ಇದು ಸಿದ್ದು-ಡಿಕೆಶಿ ಅವರ ರಾಜಕಾರಣ ಅತ್ಯಂತ ಕೆಳಮಟ್ಟಕ್ಕೆ ಹೋಗಿರುವುದನ್ನು ತೋರಿಸಿಕೊಡುತ್ತದೆ. ಅವರೇನು ಮಾಡಿದ್ರೂ ಪ್ರತಿಕ್ರಿಯೆ ನೀಡುವಷ್ಟು ಶಕ್ತಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಇದೆ ಎಂದರು.
ಬಿಜೆಪಿ ಸರ್ಕಾರ ವಿರೋಧಿಸಲು ಪಠ್ಯಪುಸ್ತಕ ಪರಿಷ್ಕರಣೆ ಅಸ್ತ್ರ: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬಂದಾಗ ಒಂದು ನಿರ್ಧಾರ ತೆಗೆದುಕೊಳ್ಳುತ್ತೆ,ಕಾಲಕಾಲಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಉದಾಹರಣೆಗಳು ಇವೆ. ಈಗ ನಮ್ಮ ಸರ್ಕಾರ ಬಂದಿದೆ. ನಾವು ಮಾಡಿದ್ದೇವೆ. ಅನೇಕರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.
ಪಠ್ಯಪುಸ್ತಕ ವಿರೋಧಿಸುವ ಭರದಲ್ಲಿ ಬಿಜೆಪಿ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ. ಸಂಘ ಪರಿವಾರದ ವಿಚಾರ ಉಲ್ಲೇಖ ಮಾಡಲು ಹಾಗೂ ಬೊಮ್ಮಾಯಿ ಸರ್ಕಾರದ ವಿರುದ್ಧ ದಾಳಿ ಮಾಡಲು, ಕಾಂಗ್ರೆಸ್ ಒಂದು ವೇದಿಕೆಯಾಗಿ ಈ ಪಠ್ಯಪುಸ್ತಕ ಪರಿಷ್ಕರಣೆಯನ್ನು ಬಳಸಿಕೊಂಡಿರಬಹುದು ಎಂದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗ, ಕೆಲವರು ಅಸಹಿಷ್ಣುತೆ ಎಂದು ಪ್ರಶಸ್ತಿ ವಾಪಸ್ ಮಾಡುತ್ತೇವೆ ಅಂದರು. ಯಾರೂ ಪ್ರಶಸ್ತಿ ವಾಪಸ್ ಕೊಡಲಿಲ್ಲ.