ಬಾಗಲಕೋಟೆ:ನಾನು ಸ್ಪರ್ಧೆ ಮಾಡೋದು ಒಂದೇ ಕ್ಷೇತ್ರದಿಂದ. ಈಗಾಗಲೇ ಹೇಳಿದ್ದೇನೆ. ಪದೇ ಪದೆ ಕೇಳಿದರೆ ಗೊತ್ತಿಲ್ಲ ಅಂತ ಹೇಳಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿ ಪ್ರಜಾಧ್ವನಿ ಯಾತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯಾವೋ ನಮ್ಮ ಸರಕಾರ ಬರೋದು ಅಷ್ಟೇ ಸತ್ಯ ಎಂದು ಹೇಳಿದರು. ಈ ಭಾರಿ ಸುಮಾರು 130 ಸ್ಥಾನವನ್ನು ಕನಿಷ್ಠ ಗೆಲ್ಲುತ್ತೇವೆ. ಸಿಎಂ ಆಗೋದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಪಾಪುಲರ್. ಅದೇ ಸಿದ್ದರಾಮಯ್ಯನವರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಅನ್ ಪಾಪುಲರ್? ಎಂದು ಪ್ರಶ್ನೆ ಮಾಡಿದರು. ಜನ ನಮಗೆ ಆಶೀರ್ವಾದ ಮಾಡಿದರೆ ಮಾತ್ರ ಗೆಲುವು ಸಾಧ್ಯ. ಹೀಗಾಗಿ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ, ಜನ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿ ಇರುತ್ತವೆ:ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿ ಇರುತ್ತವೆ. ಆದರೆ ಅವು ವಾಸ್ತವಿಕ ನೆಲೆಗಟ್ಟಿನಲ್ಲಿ ಇರಬೇಕು. ಸುಳ್ಳು ಟೀಕೆಗಳು ಇರಬಾರದು. ಬಿಜೆಪಿಗರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಬರೀ ಸುಳ್ಳು ಹೇಳೋದೇ ಕೆಲಸವಾಗಿದೆ. ಸ್ಯಾಂಟ್ರೊ ರವಿ ನಟೋರಿಯಸ್ ಕ್ರಿಮಿನಲ್. ಪೊಲೀಸ್ ಕಸ್ಟಡಿ ಪಡೆಯದೇ, ನೇರವಾಗಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದು ಯಾಕೆ?. ಸರ್ಕಾರ ಆ ಕೇಸ್ ಮುಚ್ಚಿ ಹಾಕೋದಕ್ಕೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ತನಿಖೆ ಮಾಡದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದ ಅವರು, ಬಹಳ ಜನ ಬಿಜೆಪಿಗರು ಅವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದರು.
ಸಮಾಜಕ್ಕೆ ಅವಶ್ಯಕತೆ ಇರುವುದನ್ನು ಚರ್ಚೆ ಮಾಡಬೇಕು: ಬಹಳಷ್ಟು ಜನ ಮಂತ್ರಿಗಳು, ಗೃಹ ಸಂಬಂಧಿಕರು ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗಾಗಿ ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ಸಮಯದಲ್ಲಿ ನಾ ನಾಯಕಿ ಕಾರ್ಯಕ್ರಮದಲ್ಲಿ ಸಿದ್ದು ವಾರೇ ನೋಟ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದರ ಬಗ್ಗೆ ಮಾತಾಡಬಾರದು, ಚರ್ಚೆ ಮಾಡಬಾರದು. ಯಾವುದು ಸಮಾಜಕ್ಕೆ ಅವಶ್ಯಕತೆ ಇರುತ್ತೆ ಅದನ್ನ ಚರ್ಚೆ ಮಾಡಬೇಕು.