ಬಾಗಲಕೋಟೆ: ಬದುಕು ಎಲ್ಲರಿಗೂ ಅವಕಾಶಗಳನ್ನು ನೀಡುವುದಿಲ್ಲ, ಅದನ್ನು ನಾವು ನಮಗೆ ತಕ್ಕಂತೆ ಪಡೆದುಕೊಳ್ಳಬೇಕು. ಸ್ವಾಮಿ ನಿರ್ಭಯಾನಂದ ಸ್ವಾಮೀಜಿಗಳ ಹಾಗೂ ತಂದೆ-ತಾಯಿಯ ಆಶೀರ್ವಾದದಿಂದ ನಾನು ನಿಮ್ಮ ಮುಂದೆ ಕುಳಿತಿರುವೆ. ಅವರು ಇಲ್ಲದಿದ್ದರೆ ಈ ರವಿ ಇರುತ್ತಿರಲಿಲ್ಲ, ಅವರ ಪರಿಣಾಮ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಡಿ ಚನ್ನಣ್ಣನವರ್ ಹೇಳಿದರು.
ಅವರು ಸಾಗರೋತ್ತರ ಕನ್ನಡಿಗರು ನಡೆಸಿಕೊಡುವ 13ನೇ ಸಂವಾದ ಕಾರ್ಯಕ್ರಮದಲ್ಲಿ ಭಾನುವಾರ ವಿಶೇಷ ಅತಿಥಿಗಳಾಗಿ ಆನ್ಲೈನ್ ಮೂಲಕ ಭಾಗವಹಿಸಿ ಮಾತನಾಡಿದರು.
ಸಾಗರೋತ್ತರ ಕನ್ನಡಿಗರ ಸಂವಾದದಲ್ಲಿ ಭಾಗಿಯಾಗಿದ್ದ ವಿಶೇಷ ಅತಿಥಿ ರವಿ ಡಿ ಚನ್ನಣ್ಣನವರ್ ಸಾಗರೋತ್ತರ ಕನ್ನಡಿಗರು ನನಗಿಂತಲೂ ಹಿರಿಯರು, ಸಮಾಜದಲ್ಲಿ ಬೆಳೆದು ನನಗಿಂತಲೂ ಹೆಚ್ಚಾಗಿ ದೇಶ-ವಿದೇಶಗಳನ್ನು ನೋಡಿದ್ದೀರಿ, ನಾನು ಅಷ್ಟೊಂದು ದೊಡ್ಡ ವ್ಯಕ್ತಿಯಲ್ಲ. ಬದುಕು ಎಲ್ಲರಿಗೂ ಅವಕಾಶಗಳನ್ನು ನೀಡುವುದಿಲ್ಲ, ಅದನ್ನು ನಾವು ನಮಗೆ ತಕ್ಕಂತೆ ಪಡೆದುಕೊಳ್ಳಬೇಕು ಎಂದರು.
ನಾನು ನನ್ನ ಜೀವನ ಸಾಗಿಸಲು ಎಪಿಎಂಸಿಯಲ್ಲಿ ಹಮಾಲಿ ಮಾಡಿದ್ದೇನೆ. ಬಾರ್ನಲ್ಲಿ ಸರ್ವರ್ ಆಗಿ ಕೆಲಸ ಮಾಡಿದ್ದೇನೆ, ಕೂಲಿ ಕಾರ್ಮಿಕನಾಗಿ ಕಾಫಿ ಎಸ್ಟೇಟ್ನಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಎಲ್ಲ ವೃತ್ತಿಯವರನ್ನು ಗೌರವಿಸುತ್ತೇನೆ ಎಂದು ತಮ್ಮ ಬಾಲ್ಯದ ಜೀವನದ ಕರಾಳ ಕಥೆಯನ್ನು ಬಿಚ್ಚಿಟ್ಟರು.
ನಿಮ್ಮ ತರ ಗತ್ತು-ಗಮ್ಮತ್ತು ಬರಬೇಕಾದ್ರೆ ಏನ್ ಮಾಡ್ಬೇಕು?
ಪವಿತ್ರ ಜೈನರ್ ಅವರ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚನ್ನಣ್ಣನವರ್, ಈ ಗತ್ತು-ಗಮ್ಮತ್ತು ಬರಬೇಕಾದ್ರೆ ತಂದೆ-ತಾಯಿಯೇ ಮೂಲ ಕಾರಣ. ನನ್ನ ತಾಯಿಯಿಂದ ಕಲಿತದ್ದು ಸಾಕಷ್ಟಿದೆ. ಓರ್ವ ತಾಯಿಯ ಧೈರ್ಯ ಓರ್ವ ಸ್ವಾಮಿ ವಿವೇಕಾನಂದನನ್ನು ಸೃಷ್ಟಿಸಿತು. ಓರ್ವ ಅಂಬೇಡ್ಕರ್, ಓರ್ವ ಶಿವಾಜಿ ಹೀಗೆ... ಹತ್ತಾರು ನಾಯಕರು ಇವತ್ತು ಸಾಧನೆ ಮಾಡಿದ್ದಾರೆ ಅಂದಾದರೆ ಇದು ಪೋಷಕರಿಂದಲೇ. ಪೋಷಕರ ಧೈರ್ಯವೇ ಇದಕ್ಕೆಲ್ಲ ಮೂಲ ಕಾರಣ ಎಂದರು.
ಪೊಲೀಸ್ ಸೇವೆ ಇರುವುದು ಜನಗಳ ಸೇವೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶದ ಭವಿಷ್ಯ ಯುವ ಸಮುದಾಯದ ಕೈಯಲ್ಲಿದೆ. ಎಲ್ಲ ಯುವಕರು ಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುವುದರಿಂದ ದೇಶವನ್ನು ಕಟ್ಟಲು ಆಗದು. ಖಾಲಿ ಕೈಯಲ್ಲಿ ಕುಳಿತು ಮೊಬೈಲ್ ಇದೆ ಅಂತ ವಿನಾಕಾರಣ ಅಲ್ಲಿ-ಇಲ್ಲಿ ಪೋಸ್ಟ್ ಮತ್ತು ಕಮೆಂಟ್ ಮಾಡುವುದೇ ಜೀವನವಲ್ಲ. ಎಲ್ಲರೂ ಧೈರ್ಯದಿಂದ ಹೋರಾಡಬೇಕು. ಬಂದ ಸಂಕಷ್ಟವನ್ನು ಎದುರಿಸಬೇಕು, ಅಂದಾಗ ಮಾತ್ರ ನಮ್ಮ ದೇಶ ಜಗತ್ತಿನ ಶ್ರೇಷ್ಠ ದೇಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಐಪಿಎಸ್ ಅಧಿಕಾರಿ ಚನ್ನಣ್ಣನವರ್ ಅಭಿಪ್ರಾಯಪಟ್ಟರು.
ಸಾಗರೋತ್ತರ ಕನ್ನಡಿಗರ ಸಂವಾದದಲ್ಲಿ ಭಾಗಿಯಾಗಿದ್ದ ವಿಶೇಷ ಅತಿಥಿ ರವಿ ಡಿ ಚನ್ನಣ್ಣನವರ್ ಮಕ್ಕಳನ್ನು ಆದಷ್ಟು ಮಠ-ಮಂದಿರಗಳಿಗೆ ಕರೆದುಕೊಂಡು ಹೋಗಿ. ರಾಜ್ಯದಲ್ಲಿ ಅನೇಕ ಶ್ರೇಷ್ಠ ಮಠಗಳು, ಆಶ್ರಮಗಳಿವೆ. ಅದರಲ್ಲಿ ಒಮ್ಮೆಯಾದರೂ ಗದಗಿನ ಆಶ್ರಮ ಮತ್ತು ವಿಜಯಪುರದ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮಿಗಳ ದರ್ಶನವನ್ನು ಮಾಡಿಸಿ ಸಾಕು ಎಂದು ಪೋಷಕರಲ್ಲಿ ಮನವಿ ಮಾಡಿದರು.
ರವಿಯವರ ಬಾಲ್ಯದ ಗೆಳೆಯ ಈರಪ್ಪಗೌಡ ಮಾತನಾಡಿ, 20 ವರ್ಷಗಳಿಂದ ರವಿಯವರ ಜೊತೆಗಿದ್ದೇನೆ. ಅವರ ದೃಢತೆ, ಇಚ್ಛಾಶಕ್ತಿ ಇನ್ನೂ ಕಡಿಮೆಯಾಗಿಲ್ಲ. ಅವರು ಕಾಲೇಜಿನಲ್ಲಿ ಸೂರ್ಯನಾಗಿ ಉರಿತಿದ್ರು. ಆದ್ರೆ ಈಗ ಕರ್ನಾಟಕದ ಯುವಕರ ಬೆಳಕಾಗಿ ಪ್ರಜ್ವಲಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸುತ್ತೆನೆ ಎಂದರು. ರವಿ ಅವರ ಸಹೋದ್ಯೋಗಿ ರಘು ಗೌಡರು ಸಹ ಮಾತನಾಡಿದರು.
ಇಟಲಿ ಕೆನಡಾ, ಯುಎಸ್ಎ, ಜರ್ಮನಿಯಲ್ಲಿರುವ ಕನ್ನಡಿಗರ ಸಂವಾದ ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ಹೇಮೆಗೌಡ ಮಧು (ಇಟಲಿ) ನಡೆಸಿಕೊಟ್ಟರು. ಯುರೋಪಿನ ದೇಶಗಳ ಜನರ ಸಂವಾದ ಮತ್ತು ಪ್ರಶ್ನೋತ್ತರ ಕಾರ್ಯಕ್ರಮವನ್ನು ಸಾಗರೋತ್ತರ ಕನ್ನಡಿಗರ ವೇದಿಕೆಯ ಉಪಾಧ್ಯಕ್ಷ ಗೋಪಾಲ ಕುಲಕರ್ಣಿ (ಯುಕೆ) ನಡೆಸಿಕೊಟ್ಟರು. ದುಬೈ ಮತ್ತು ಇನ್ನಿತರ ದೇಶಗಳ ಜೊತೆಗಿನ ಸಂವಾದವನ್ನು ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ (ಯುಎಇ) ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಸಾಗರೋತ್ತರ ಕನ್ನಡಿಗರ ಜಂಟಿ ಕಾರ್ಯದರ್ಶಿ ರವಿ ಮಹದೇವ ಅವರು (ಸೌದಿ ಅರೇಬಿಯಾ) ನಡೆಸಿಕೊಟ್ಟರು. ಪ್ರಾಸ್ತಾವಿಕ ಹಾಗೂ ಸ್ವಾಗತ ಕಾರ್ಯಕ್ರಮವನ್ನು ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ (ಯುಎಇ) ನೆರವೇರಿಸಿದರು.
ಸಾಗರೋತ್ತರ ಕನ್ನಡಿಗರ ಸಂವಾದದಲ್ಲಿ ಭಾಗಿಯಾಗಿದ್ದ ವಿಶೇಷ ಅತಿಥಿ ರವಿ ಡಿ ಚನ್ನಣ್ಣನವರ್ ಸಾಗರೋತ್ತರ ಕನ್ನಡಿಗರಿಂದ ಸಾಧಕರಿಗೆ ನೀಡುವ 'ಸಾಗರೋತ್ತರ ಸಾಧಕರು' ಎಂಬ ಪ್ರಶಸ್ತಿಯನ್ನು ಕ್ರಿಷ್ ಜಂಗಲ್ (ಸೌದಿ ಅರೇಬಿಯಾ) ಅವರಿಗೆ 'ಸಮಾಜಸೇವೆ' ಸಲುವಾಗಿ ರವಿ ಡಿ ಚನ್ನಣ್ಣನವರ್ ಅವರ ಕಡೆಯಿಂದ ಪ್ರದಾನ ಮಾಡಲಾಯಿತು.
ಕ್ರಿಷ್ ಜಂಗಲ್ ಮಾತನಾಡಿ, ನಾನು ಹುಬ್ಬಳ್ಳಿ ಬಳಿಯ ಅಣ್ಣಿಗೇರಿಯವನು. ಈ ಸಾಧನೆಗೆ ಸಾಗರೋತ್ತರ ಕನ್ನಡಿಗರ ಜೊತೆಗೆ ಸಂವಾದದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ, ನನಗೆ ಪ್ರಶಸ್ತಿ ದೊಡ್ಡದಲ್ಲ, ನನ್ನನ್ನು ನಿಮ್ಮೊಳಗೊಬ್ಬನಾಗಿ ಅವಕಾಶ ನೀಡಿದ್ದು ಮಹತ್ವದ ಕೆಲಸ ಎಂದು ಹರ್ಷ ವ್ಯಕ್ತಪಡಿಸಿದರು.