ಬಾಗಲಕೋಟೆ :ಇಂದು ಜಿಲ್ಲೆಯಲ್ಲಿ ಒಂದೂ ಕೊರೊನಾ ಕೇಸ್ ಪತ್ತೆಯಾಗದೆ ಇಬ್ಬರು ಕೋವಿಡ್-19 ನಿಂದ ಗುಣಮುಖರಾಗಿ ಡಿಸಾರ್ಜ್ ಆಗಿದ್ದಾರೆ.
ಇಲ್ಲಿಯವರೆಗೆ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 76ಕ್ಕೆ ಏರಿಕೆ ಆಗಿದೆ. ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 43 ವರ್ಷದ ಮಹಿಳೆ (ಪಿ-1395) ಹಾಗೂ ಮುಧೋಳನ 32 ವರ್ಷದ ಪುರುಷ (ಪಿ-3415) ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಪ್ರಮಾಣ ಪತ್ರ ವಿತರಣೆ ಮಾಡಿದ್ದು, ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಸೋಂಕಿನಿಂದ ಗುಣಮುಖರಾದವರನ್ನು ಬೀಳ್ಕೊಟ್ಟರು.
ಜಿಲ್ಲಾ ಕೋವಿಡ್ ಲ್ಯಾಬ್ನಲ್ಲಿ ಪರೀಕ್ಷಿಸಲಾದ 68 ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಿಂದ ಮೇ 4ಕ್ಕೆ ಬೆಂಗಳೂರಿಗೆ ಕಳುಹಿಸಲಾದ 78 ಸ್ಯಾಂಪಲ್ಗಳ ಪೈಕಿ 67 ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿದೆ.
ಇನ್ನು 11 ಸ್ಯಾಂಪಲ್ಗಳ ವರದಿ ನಿರೀಕ್ಷೆಯಲ್ಲಿದ್ದು ಸೋಂಕಿತರ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು 8637 ಸ್ಯಾಂಪಲ್ಗಳಲ್ಲಿ 8499 ನೆಗೆಟಿವ್, 91 ಪಾಜಿಟಿವ್ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 76 ಮಂದಿ ಗುಣಮುಖರಾಗಿದ್ದು, 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.