ಬಾಗಲಕೋಟೆ :ಕೊರೊನಾದಿಂದ ಕೆಲಸ ಬಿಟ್ಟು ಸ್ವಗ್ರಾಮಕ್ಕೆ ಮರಳಿರುವ ಪದವೀಧರ ಯುವಕರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ನಾಳೆ ಎರಡನೇ ಹಂತದ ಗ್ರಾ. ಪಂ. ಚುನಾವಣೆ 5 ತಾಲೂಕಿನಲ್ಲಿ ನಡೆಯಲಿದೆ. ತಮ್ಮ ಗ್ರಾಮಾಭಿವೃದ್ಧಿಯ ಆಶಯ ಹೊಂದಿರುವ ಯುವಕರು ರಾಜಕೀಯದ ಚದುರಂಗದಾಟದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ತಾಲೂಕಿನ ಯಡಹಳ್ಳಿ ಗ್ರಾ. ಪಂಚಾಯಿತಿಯ ಆನದಿನ್ನಿ ಕ್ರಾಸ್ ಸಾಮಾನ್ಯ ಸ್ಥಾನಕ್ಕೆ ಬಿಕಾಂ, ಎಂಬಿಎ ಪದವಿ ಪಡೆದ ಸಂತೋಷ ಬಜೆಟ್ಟಿ ಎಂಬುವವರು ಸ್ಪರ್ಧೆ ಮಾಡಿದ್ದಾರೆ.
ಭಗವತಿ ಗ್ರಾಮ ಪಂಚಾಯತ್ನ ಕಿರಸೂರ ಗ್ರಾಮದ ವಾರ್ಡ್ ನಂಬರ್ 1ರಲ್ಲಿ ಪ್ರವೀಣ ಕುಮಾರ ಮುದ್ದಪ್ಪ ಸಿಂದಗಿ ಎಂಬ ಬಿ.ಇ ಮತ್ತು ಎಂಟೆಕ್ ಪದವೀಧರ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.
ಚುನಾವಣೆ ಅಂದ್ರೆ ನೋಟುಗಳಿಗೆ ಓಟುಗಳು ಎನ್ನುವ ಕಾಲದಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದು ಚುನಾವಣಾ ಕಣಕ್ಕೆ ಇಳಿದಿರುವ ವಿದ್ಯಾವಂತ ಯುವಕರು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಎಲೆಕ್ಷನ್‌ನಲ್ಲಿ ಜಯಗಳಿಸಿದ ಬಳಿಕ ರಾಜಕೀಯದ ಊಸರವಳ್ಳಿ ಆಟದಲ್ಲಿ ತಾವು ಬಣ್ಣ ಬದಲಿಸದೆ ಅಭಿವೃದ್ಧಿ ಕಡೆ ಗಮನಹರಿಸಿದರೆ ಉತ್ತಮ ಎನ್ನುವುದು ಪ್ರಜ್ಞಾವಂತರ ಅಂಬೋಣ.