ಬಾಗಲಕೋಟೆ: ಇನ್ನು ಆರು ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತ ಗಳಿಸಿ ಮತ್ತೆ ಆಡಳಿತಕ್ಕೆ ಬರಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭವಿಷ್ಯ ನುಡಿದರು. ಜಿಲ್ಲೆಯ ಹಿಪ್ಪರಗಿ ಗ್ರಾಮದಲ್ಲಿ ನಡೆದ ಸಂಗಮೇಶ್ವರ ಮಹಾರಾಜರ 91ನೇ ಪುಣ್ಯಸ್ಮರಣೆ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಇದೇ ವೇಳೆ ಕನ್ನಡಿಗರು ಗೋವಾದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.
ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿರುವ ಘಟನಾವಳಿಗೆ ಪ್ರತಿಕ್ರಿಯಿಸಿ, ಕರ್ನಾಟಕದ ಜನರು ಗೋವಾದಲ್ಲಿ, ಗೋವಾ ನಿವಾಸಿಗಳು ಕರ್ನಾಟಕದಲ್ಲಿ ಸಹೋದರರಂತೆ ಇದ್ದಾರೆ. ನಾವೆಲ್ಲ ಮೊದಲು ಭಾರತೀಯರು. ನಾನು ನಿನ್ನೆಯಷ್ಟೇ ಕನ್ನಡಿಗರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದೆ. ಕನ್ನಡಿಗರು ಅಲ್ಲಿ ಸುರಕ್ಷಿತವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.