ಬಾಗಲಕೋಟೆ:ಜಿಲ್ಲೆಯಲ್ಲಿ ಹೃದಯ ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗಬೇಕಾದಂತಹ ಸ್ಥಿತಿ ಇದೆ. ಇದರಿಂದ ಬಡ ರೋಗಿಗಳು ಹಣವಿಲ್ಲದೆ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದರು. ಆದರೀಗ ಸರ್ಕಾರದ ಯೋಜನೆಯಡಿ ಕುಮಾರೇಶ್ವರ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಸೇವೆಯನ್ನು ಆರಂಭವಾಗಿದ್ದು, ಬಡರೋಗಿಗಳಿಗೆ ವರದಾನವಾಗಿದೆ.
ಕೊಪ್ಪಳ ಜಿಲ್ಲೆಯ ಮಡಿಕೇರಾ ಗ್ರಾಮದ 68 ವರ್ಷದ ಹನಮಪ್ಪ ಬಿಂಜವಾಡಗಿ ಎಂಬುವವರು ಕೆಲವು ತಿಂಗಳಿಂದ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ನಂತರ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾದಾಗ ಮೂರು ರಕ್ತನಾಳಗಳಲ್ಲಿ ಬ್ಲಾಕ್ಗಳಿರುವುದು ಖಚಿತವಾಯಿತು. ಇದನ್ನರಿತ ಡಾ.ಗಿರಿಧರ್ ಕಮಲಾಪೂರ ಅವರ ನೇತೃತ್ವದ ವೈದ್ಯರ ತಂಡ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿ ರೋಗಿಯನ್ನು ಗುಣಪಡಿಸಿದೆ. ಇದು ಆಸ್ಪತ್ರೆಯಲ್ಲಿ ನಡೆದ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ಸರ್ಕಾರದ ಆಯುಷ್ಮಾನ್ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ವೈದ್ಯರು ಹೇಳಿದ್ದು..
'ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೃದಯಸಂಬಂಧಿ ಸಮಸ್ಯೆ ಇದೆ ಎಂದಾಕ್ಷಣ ಹೆದರುತ್ತಾರೆ. ಸ್ಟಂಟ್ ಅಳವಡಿಕೆ ಮಾಡಿದರೆ ಎಲ್ಲವೂ ಮುಗಿದಂತೆ ಎಂದು ಭಾವಿಸುತ್ತಾರೆ. ಆದರೆ ಕೆಲವು ಗಂಭೀರ ಸ್ವರೂಪದ ಸಮಸ್ಯೆಗಳಿರುತ್ತವೆ. ಹಾಗಾಗಿ ಸಂದರ್ಭವನ್ನು ನೋಡಿಕೊಂಡು ನಾವು ರೋಗಿಗಳಿಗೆ ಧೈರ್ಯ ತುಂಬಿ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ. ಅದರಂತೆ ಹನಮಪ್ಪ ಬಿಂಜವಾಡಗಿ ಅವರಿಗೂ ಯಶ್ವಸಿಯಾಗಿ ತೆರದ ಹೃದಯರೋಗ ಚಿಕಿತ್ಸೆ ಮಾಡಲಾಗಿದೆ. ಅವರೀಗ ಆರಾಮಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಇದೇ ಶಸ್ತ್ರಚಿಕಿತ್ಸೆಯನ್ನು ಹೊರಗಡೆ ಮಾಡಿದರೆ ಅಂದಾಜು 3 ರಿಂದ 4 ಲಕ್ಷ ರೂ ವೆಚ್ಚ ತಗಲುತ್ತದೆ. ಇದನ್ನರಿತು ಜನರಿಗೆ ಅನುಕೂಲವಾಗಲೆಂದು ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆಯನ್ನು ಆರಂಭಿಸಲಾಗಿದೆ' ಎಂದು ಡಾ.ಗಿರಿಧರ್ ಕಮಲಾಪೂರ ಹೇಳಿದರು.