ಬಾಗಲಕೋಟೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ್ರೆ ನಾವು ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷದವರು ಇದ್ದಾರೆ. ಮುಂಬರುವ ದಿನಗಳಲ್ಲಿ ಪ್ರತಿಪಕ್ಷ ಸ್ಥಾನವನ್ನು ಕಾಂಗ್ರೆಸ್ಸಿಗರು ಕಳೆದುಕೊಳ್ತಾರೆ. ನಮಗೂ ಆ ರೀತಿ ಕೆಟ್ಟ ಪದಗಳನ್ನು ಬಳಸಲು ಬರುತ್ತದೆ. ಆದ್ರೆ, ನಾನು ಖಂಡಿತ ಅಂತಹ ಪದಗಳನ್ನು ಬಳಸಲು ಇಷ್ಟಪಡುವುದಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗರು ರಾಷ್ಟ್ರೀಯ ನಾಯಕರನ್ನು ಕರೆತಂದು ಪ್ರಚಾರ ತೆಗೆದುಕೊಳ್ಳುತ್ತಿದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯಕ್ಕೆ ಕರೆತರಲು ಕಾಂಗ್ರೆಸ್ನಲ್ಲಿ ರಾಷ್ಟ್ರೀಯ ನಾಯಕರು ಯಾರಿದ್ದಾರೆ? ಎಂದು ಪ್ರಶ್ನೆ ಮಾಡಿದ ಅವರು, ರಾಹುಲ್, ಪ್ರಿಯಾಂಕಾ ಗಾಂಧಿ ಬಂದ್ರೆ ಗೆಲ್ಲುವ ಸೀಟ್ ಕೂಡ ಗೆಲ್ಲಲಾಗಲ್ಲ. ಯುಪಿ, ಗುಜರಾತ್ನಲ್ಲಿ ಭಾರಿ ಪ್ರಚಾರ ನಡೆಸಿ ಸೋಲನ್ನೊಪ್ಪಿಕೊಂಡಿದ್ದಾರೆ. ಹಾಗಾಗಿ, ಕಾಂಗ್ರೆಸ್ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುವುದಿಲ್ಲ. ಅವರ ಮುಖ ನೋಡಿ ಜನ ಮತ ಕೊಡಲ್ಲ. ಸಿದ್ದರಾಮಯ್ಯನವರು ಪ್ರತಿಪಕ್ಷ ನಾಯಕ ಎಂಬ ಕಲ್ಪನೆ ಇಲ್ಲದೇ ಬಾಯಿಗೆ ಬಂದ ಹಾಗೆ ಪದಗಳನ್ನು ಬಳಸುತ್ತಿದ್ದಾರೆ. ಅವರು ಮಾಡಿರುವ ಭಾಷಣವನ್ನು ಒಮ್ಮೆ ತೆಗೆದು ಅವರೇ ನೋಡಲಿ ಎಂದು ಟಾಂಗ್ ನೀಡಿದರು.
ಈ ಹಿಂದೆ ಒಳ್ಳೆಯ ಕೆಲಸ ಮಾಡಿದ್ರೆ ಕಾಂಗ್ರೆಸ್ನವರು ಯಾಕೆ ಸರ್ಕಾರ ಕಳೆದುಕೊಳ್ಳುತ್ತಿದ್ದರು. ನೀವು ಮಾಡಿದ ಸಾಧನೆ ಸರಿಯಿಲ್ಲ ಅಂತಾನೆ ನಿಮ್ಮನ್ನ ಜನ ಮನೆಗೆ ಕಳುಹಿಸಿದ್ದು. ಆದ್ರೆ, ಯಾರಿಗೂ ಏಕವಚನದಲ್ಲಿ ಮತ್ತು ವ್ಯಕ್ತಿಗತ ಟೀಕೆ ಮಾಡಬೇಡಿ. ಸೈದ್ಧಾಂತಿಕವಾಗಿ, ಅಭಿವೃದ್ಧಿ ಪರವಾಗಿ ಟೀಕೆ ಮಾಡಿ ನಾನು ಒಪ್ಪುತ್ತೇನೆ ಎಂದರು.