ಬಾಗಲಕೋಟೆ:ಸಚಿವ ಶರಣಪ್ರಕಾಶ್ ಪಾಟೀಲ್ ಅವರನ್ನು ಈ ತಕ್ಷಣದಿಂದಲೇ ಮಂತ್ರಿ ಸ್ಥಾನದಿಂದ ತೆಗೆದು ಹಾಕಬೇಕೆಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಜಿಲ್ಲೆಯ ಐತಿಹಾಸಿಕ ಕೇಂದ್ರ ಬಾದಾಮಿ-ಬನಶಂಕರಿ ದೇವಿಯ ದರ್ಶನಕ್ಕೆ ಶುಕ್ರವಾರ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಬ್ಬರು ಸಚಿವರ ಮೇಲೆ ನೇರ ಆರೋಪ ಬಂದಿದೆ. ಇಬ್ಬರನ್ನೂ ಮಂತ್ರಿ ಮಂಡಲದಿಂದಲೂ ಕೈಬಿಡಬೇಕೆಂದು ಒತ್ತಾಯಿಸಿದರು.
ಶರಣಪ್ರಕಾಶ್ ಪಾಟೀಲ್ ಹೆಸರು ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮೇಲೆ ಈ ಹಿಂದೆ ಆರೋಪ ಕೇಳಿ ಬಂದಾಗ ತಕ್ಷಣ ರಾಜೀನಾಮೆ ಕೊಡಿಸಿದಿರಿ. ಈಗ ಶರಣಪ್ರಕಾಶ್ ಪಾಟೀಲ್ ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುತ್ತೀರಾ ಎಂದು ಈಶ್ವರಪ್ಪ ಪ್ರಶ್ನಿಸಿದರು. ಬಂಡತನದಲ್ಲಿ ಉಳಿಸಿಕೊಳ್ಳುತ್ತೇವೆ ಅಂದ್ರೆ ನಾನೇನೂ ಮಾಡಲ್ಲ. ಆದರೆ, ರಾಜ್ಯದ ಜನ ನೋಡುತ್ತಿದ್ದಾರೆ. ಮಂತ್ರಿಸ್ಥಾನದಲ್ಲಿ ಉಳಿಸಿಕೊಳ್ಳುವುದು ಸೂಕ್ತವಲ್ಲ, ತಕ್ಷಣ ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿದೆ. ಮೂರು ತಿಂಗಳಲ್ಲಿ ವರದಿ ನೀಡುವಂತೆಯೂ ಹೇಳಿದೆ. ಆದೇಶ ಬಂದ ಬಳಿಕ ಡಿಸಿಎಂ ಮತ್ತೊಮ್ಮೆ ಜೈಲಿಗೆ ಹೋಗುವುದು ಖಾತ್ರಿ ಅಂತಾ ಹೇಳಿಕೆ ನೀಡಿದ್ದೆವು. ಇದಕ್ಕೆ ಸಹೋದರಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಪ್ರಕರಣವನ್ನು ನಿಭಾಯಿಸೋದು ಡಿಸಿಎಂಗೆ ಗೊತ್ತಿದೆ, ಯಾವುದೇ ಕಾರಣಕ್ಕೂ ಜೈಲಿಗೆ ಹೋಗಲ್ಲ. ಅವರ ಪರ ನ್ಯಾಯ ಸಿಗುತ್ತೆ ಅಂತ ಹೇಳಿದ್ದಾರೆ. ಈಶ್ವರಪ್ಪ ಜಡ್ಜ್ ಅಲ್ಲ, ಜಡ್ಜ್ ಹೇಳಿದ್ರೆ ನಾನು ಜೈಲಿಗೆ ಹೋಗುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹಾಗಾದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಜಡ್ಜಾ ಎಂದು ಈಶ್ವರಪ್ಪ ಕೇಳಿದರು.