ಬಾಗಲಕೋಟೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆಯಿಂದ ನಾಲ್ಕು ದಿನಗಳ ಕಾಲ ಬಾಗಲಕೋಟೆ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾದಾಮಿ ಶಾಸಕರಾದ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾಳೆ 27 ರಿಂದ ಬಾದಾಮಿಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಾಗೂ 29, 30ನೇ ತಾರೀಖಿನಂದು ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಸಂಚರಿಸಲಿದ್ದಾರೆ.
ಹುಬ್ಬಳ್ಳಿ ಮೂಲಕ ಬಾದಾಮಿಗೆ ಆಗಮಿಸಿ, ಆಲೂರ ಎಸ್.ಕೆ ಗ್ರಾಮದಲ್ಲಿ ಪಂಚಾಯತ್ ಕಟ್ಟಡಕ್ಕೆ ಅಡಿಗಲ್ಲು, ಕಾಕನೂರ ಗ್ರಾಮದಲ್ಲಿ ಹುತಾತ್ಮ ಯೋಧನ ಮನೆಗೆ ಭೇಟಿ, ಚಿಮ್ಮನಕಟ್ಟಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಶಂಕುಸ್ಥಾಪನೆ, ಬಾದಾಮಿಯಲ್ಲಿ ಪಿಡಿಒಗಳ ಸಭೆ ನಡೆಸಿ, ಸಂಜೆ ಸಾರ್ವಜನಿಕ ಅಹವಾಲು ಸ್ವೀಕಾರ ಬಳಿಕ ವಾಸ್ತವ್ಯ ಮಾಡಲಿದ್ದಾರೆ. ತಾ. 28ರಂದು ಬಾದಾಮಿಯಲ್ಲಿ ಸಭೆ ನಡೆಸಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.
ಜೂನ್.29 ರಂದು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿಲಿರುವ ಅವರು ನಂತರ ಬಾಗಲಕೋಟೆ ನಗರಕ್ಕೆ ಬರಲಿದ್ದಾರೆ. ಅಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಬಾಗಲಕೋಟೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಿಲ್ಲಾ ಕಾಂಗ್ರೆಸ್ ಮುಖಂಡರ ಭೇಟಿ, ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಂತರ ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಜೂನ್.30 ರಂದು ಬಾಗಲಕೋಟೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಹುಬ್ಬಳ್ಳಿ ಮೂಲಕ ವಿಮಾನದಿಂದ ಬೆಂಗಳೂರಿಗೆ ಪಯಾಣ ಬೆಳೆಸಲಿದ್ದಾರೆ.