ಬಾಗಲಕೋಟೆ:ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಮಹಾಮಳೆಗೆ ಜಮಖಂಡಿಯಲ್ಲಿ ಪ್ರವಾಹ ಭೀತಿ - ಕೃಷ್ಣ ನದಿಗೆ ಪ್ರವಾಹ ಭೀತಿ
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ಇದರಿಂದಾಗಿ ಜಮಖಂಡಿ ತಾಲೂಕಿನ ಜನ ಪ್ರವಾಹ ಭೀತಿ ಎದುರಿಸುವಂತಾಗಿದೆ.

ಕೃಷ್ಣ ನದಿಗೆ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿರುವ ಪರಿಣಾಮ ಜಮಖಂಡಿ ತಾಲೂಕಿನ ಮುತ್ತೂರು, ಮೈಗೂರು, ಕಂಕಣವಾಡಿ ಸೇರಿದಂತೆ ಇತರ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ತುಬಚಿ- ಶೂರಪಾಲಿ ಸೇತುವೆ ಮುಳಗಡೆ ಆಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಸೇತುವೆ ಮುಳಗಡೆಯಿಂದಾಗಿ ಜಮಖಂಡಿ ಪಟ್ಟಣಕ್ಕೆ ಹೋಗುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಆಲಮಟ್ಟಿ ಜಲಾಶಯದ ಹಿನ್ನೀರಿನ ಒಳಹರಿವು ಸಹ ಹೆಚ್ಚಾಗಿದ್ದು, ಅಷ್ಟೇ ಪ್ರಮಾಣದಲ್ಲಿ ನೀರು ಹೂರಗೆ ಬಿಡಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿರುವುದರಿಂದ ಕೃಷ್ಣಾ ನದಿ ಪ್ರವಾಹ ಭೀತಿ ಉಂಟಾಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜನತೆಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ.