ಬಾಗಲಕೋಟೆ :ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಜನತೆ ಯಾವುದೇ ರೀತಿಯ ಆತಂಕಪಡುವಂತಿಲ್ಲ. ಪ್ರವಾಹ ಉಂಟಾದ ಪ್ರದೇಶದ ಬಗ್ಗೆ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೇ ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸುವರು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರವಾಹ ಉಂಟಾಗಿರುವ ಕುರಿತುನಡೆದ ತುರ್ತು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ನಡುಗಡ್ಡೆ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ಇಲ್ಲಿನ 38 ಕುಟುಂಬಗಳ ಪೈಕಿ ಈಗಾಗಲೇ 10 ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕರೆದ್ಯೊಯಲಾಗಿದೆ. ಜನ- ಜಾನುವಾರುಗಳಿಗೆ ಯಾವುದೇ ರೀತಿಯ ಹಾನಿ ಆಗಿಲ್ಲ. ಉಳಿದ 28 ಕುಟುಂಬಗಳ ರಕ್ಷಣೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಉಂಟಾದಲ್ಲಿ ತಕ್ಷಣವೇ ಅವರನ್ನು ಬೇರೆಡೆಗೆ ಸ್ಥಳಾಂತರಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಭರವಸೆ ನೀಡಿದರು.
ಪ್ರವಾಹ ಪರಿಸ್ಥಿತಿ ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಇಲ್ಲವೇ ಸಂದೇಶದ ಮೂಲಕ ಮಾಹಿತಿ ತಿಳಿಸಿ. ಈಗಾಗಲೇ ಪ್ರವಾಹದಿಂದ ಜಮಖಂಡಿ ತಾಲೂಕಿನ ತುಬಚಿ- ಸುರಪಾಲಿ ಮಾರ್ಗದ ರಸ್ತೆ ಸಂಪರ್ಕ ಕಡಿತಗೊಂಡಿದೆ. ತುಬಚಿಗೆ ಬರುವ ಸಾರ್ವಜನಿಕರು ಜಮಖಂಡಿ- ಸಾವಳಗಿ- ತುಂಗಳ ಮಾರ್ಗವಾಗಿ ಸಂಚರಿಸುವಂತೆ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಬಸ್ಗಳು ದಿನಕ್ಕೆ 4 ಬಾರಿ ಸಂಚರಿಸಲಿದ್ದು, ಅಗತ್ಯವಿದ್ದರೇ ಹೆಚ್ಚುವರಿ ಬಸ್ಗಳನ್ನು ಒದಗಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದರು.