ಕರ್ನಾಟಕ

karnataka

ETV Bharat / state

ಪರಿಸರ ಸ್ನೇಹಿ ಬ್ಯಾಗ್​ ತಯಾರಿಕೆ, ಸಾವಿರಾರು ಮಹಿಳೆಯರಿಗೆ ಸ್ವಯಂ ಉದ್ಯೋಗ.. ಬಾಗಲಕೋಟೆಯಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಕೇಂದ್ರದಿಂದ ₹ 5 ಕೋಟಿ ಅನುದಾನ - ಚೋಟ್ ಬ್ಯಾಗ್​ ಕ್ಲಸ್ಟರ್

ಬಾಗಲಕೋಟೆಯ ಮಹಿಳಾ ಒಕ್ಕೂಟದ ಮಹಿಳೆಯರು ಸ್ವಸಹಾಯ ಸಂಘದಡಿಯ ಸ್ವಯಂ-ಉದ್ಯೋಗ ಆರಂಭಿಸಿದ್ದಾರೆ.

ಬಾಗಲಕೋಟೆ ನಾರಿ ಶಕ್ತಿ
ಬಾಗಲಕೋಟೆ ನಾರಿ ಶಕ್ತಿ

By ETV Bharat Karnataka Team

Published : Oct 26, 2023, 6:16 PM IST

Updated : Oct 26, 2023, 8:00 PM IST

ಬಾಗಲಕೋಟೆಯಲ್ಲಿ ಪರಿಸರ ಸ್ನೇಹಿ ಬ್ಯಾಗ್​ ತಯಾರಿಕೆ

ಬಾಗಲಕೋಟೆ:ಮಹಿಳೆ ಮನಸ್ಸು ಮಾಡಿದರೆ ಪ್ರಪಂಚವನ್ನೇ ಗೆಲ್ಲಬಹದು ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದ ಮಹಿಳೆಯರು ಮಾದರಿಯಾಗಿದ್ದಾರೆ. ಇವರ ಸಾಧನೆಯ ಫಲ ಎಂಬಂತೆ ಇದೀಗ ಕೇಂದ್ರ ಸರ್ಕಾರ 5 ಕೋಟಿ ರೂಪಾಯಿ ಅನುದಾನ ನೀಡಿ ಬೃಹತ್ ಕಾರ್ಖಾನೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.

ಹೌದು.. ಪರಿಸರಸ್ನೇಹಿ ಬ್ಯಾಗ್​ ತಯಾರಿಕೆ ಮೂಲಕ ಬಾಗಲಕೋಟೆ ವನಿತೆಯರು ರಾಜ್ಯವಲ್ಲದೇ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲೂ ಯಶಸ್ವಿಯಾಗಿದ್ದಾರೆ. ಕಟಗೇರಿ ಗ್ರಾಮದಲ್ಲಿರುವ ಪಂಚಾಯತ್​ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಕಾರ್ಯವನ್ನು ಮೆಚ್ಚಿ ಕೇಂದ್ರ ಸರ್ಕಾರ ಬ್ಯಾಗ್​ ಕ್ಲಸ್ಟರ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಈ ಮೂಲಕ ಜಿಲ್ಲೆಯ ಸಾವಿರಾರು ಸಂಖ್ಯೆಯ ಮಹಿಳೆಯರಿಗೆ ಉದ್ಯೋಗ ಸಿಗಲಿದ್ದು, ದೇಶಕ್ಕೆ ಇವರ ಸಾಧನೆ ಮಾದರಿ ಆಗಿದೆ.

ಗ್ರಾಮದ ಸುತ್ತಮುತ್ತಲಿನಲ್ಲಿ ಈಗಾಗಲೇ ಸುಮಾರು 114 ಮಹಿಳಾ ಸ್ವ ಸಹಾಯ ಸಂಘಗಳು ನೋಂದಣಿ ಆಗಿದ್ದು, ಮಹಿಳಾ ಒಕ್ಕೂಟದಡಿ ಸ್ವಾವಲಂಬನೆ ಉದ್ಯೋಗ ಮಾಡುತ್ತಿದ್ದಾರೆ. ಕೇವಲ ಒಂದು ಸಂಘದಿಂದ ಪ್ರಾರಂಭವಾದದ್ದು, ಈಗ ಸಾವಿರಾರು ಮಹಿಳೆಯರು ಸ್ವ-ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಮೊದಲು 5 ಲಕ್ಷ ರೂಪಾಯಿಗಳ ಸರ್ಕಾರದ ಸಹಾಯಧನ ಪಡೆದ ಈ ಮಹಿಳೆಯರು ನಂತರ ಕೇಂದ್ರ ಸರ್ಕಾರದಿಂದ 21 ಲಕ್ಷ ರೂಪಾಯಿಗಳ ಸಹಾಯಧನ ಪಡೆದರು. ಅದೇ ಉತ್ಸಾಹ, ಶ್ರಮದಿಂದ ಈಗ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸಿ, ಲಾಭದಾಯಕವನ್ನಾಗಿಸಿದ್ದಾರೆ. ಪ್ರತಿ ಮಹಿಳಾ ಘಟಕದವರಿಗೂ ಕಡಿಮೆ ಬಡ್ಡಿದರದಲ್ಲಿ ಸಾಲ‌ ನೀಡಿ, ಸ್ವ-ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಪ್ಲಾಸ್ಟಿಕ್​ರಹಿತ ಬ್ಯಾಗ್​ ತಯಾರಿಕೆ.. ಪ್ಲಾಸ್ಟಿಕ್ ಬಳಕೆ ಇಲ್ಲದೆ ಗುಳೇದಗುಡ್ಡ ಖಣದಿಂದ ವಿವಿಧ ಬಗೆಯ ಆಕರ್ಷಕ ಬ್ಯಾಗ್ ತಯಾರಿಸುತ್ತಾರೆ. ರಾಜ್ಯ ಅಷ್ಟೇ ಅಲ್ಲದೇ ದೇಶದ ವಿವಿಧ ಪ್ರದೇಶದಲ್ಲಿ ನಡೆಯುವ ಮೇಳ‌ದಲ್ಲಿ ಈ ಮಹಿಳೆಯರು ಭಾಗವಹಿಸಿ ತಮ್ಮ ಕಲೆಯನ್ನು ಪಸರಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆದ ಸರಸ್​ ಮೇಳದಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಮಹಿಳಾ ದಿನಾಚರಣೆ ಸಮಯದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರ ಕೆಲಸ ಕಾರ್ಯಗಳನ್ನು ಮೆಚ್ಚಿ ಕೇಂದ್ರ ಸರ್ಕಾರದ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗ್ರಾಮ ಪಂಚಾಯತ್​ ವ್ಯಾಪ್ತಿಗೆ ಬರುವ ಜಾಗವನ್ನು ಗುರುತಿಸಿ ಶೀಘ್ರದಲ್ಲೇ ಕಾರ್ಖಾನೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಇದೇ ಮಹಿಳೆಯರು ಕೊರೊನಾ ಸಮಯದಲ್ಲಿ ಮಾಸ್ಕ್​ ತಯಾರಿಸಿ ಸೇವೆ ಸಲ್ಲಿಸಿದ್ದರು. ಹರ್​​ ಘರ್​ ತಿರಂಗಾದಡಿ ರಾಷ್ಟ್ರಧ್ವಜ ತಯಾರಿಸಿದ್ದಾರೆ. ಪ್ರವಾಹ ಬಂದಾಗ ಗ್ರಾಮಗಳಿಗೆ ತೆರಳಿ ತಮ್ಮಿಂದಾದ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯತ್​ದಿಂದಾಗುವ ಕಾರ್ಯಕ್ರಮಗಳಿಗೆ ಅಲ್ಲದೆ ಇತರ ಕಾರ್ಯಕ್ರಮಗಳಿಗೆ ಬ್ಯಾಗ್ ತಯಾರಿಸಿ ಕೊಡುತ್ತಾರೆ. ಜಿಲ್ಲಾ ಪಂಚಾಯತ್​ನಿಂದ ಸಿಗುವ ಸೌಲಭ್ಯಗಳನ್ನೆಲ್ಲಾ ಮಹಿಳೆಯರು ಬಳಕೆ ಮಾಡಿಕೊಂಡಿದ್ದಾರೆ.

ಒಟ್ಟಾರೆ ಮನೆಯಲ್ಲಿ ಹಣಕ್ಕಾಗಿ ಕೈವೊಡ್ಡದೆ, ತಾವೇ ಮನೆಯ ಯಜಮಾನಿ ಆಗಿ ಕುಟುಂಬ‌ ನಿರ್ವಹಣೆ ಜೊತೆಗೆ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸುತ್ತಿದ್ದಾರೆ. ಈ ಸಾಧನೆಗೆ ಮನೆಯವರ ಸಹಕಾರವೂ ಇದ್ದು, ತಮ್ಮಲ್ಲಿ ಸಾಕಷ್ಟು ಬದಲಾವಣೆ ಆಗಿರುವುದಾಗಿ ಮಹಿಳಾ ಒಕ್ಕೂಟ ಸದಸ್ಯರಾದ ಭಾಗೀರಥಿ ಮೇಟಿ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಐಟಿ ಉದ್ಯೋಗ ತೊರೆದು ಸಾವಯವ ಕೃಷಿ: ಕಿವಿ ಹಣ್ಣು ಬೆಳೆದು ವಾರ್ಷಿಕ 40 ಲಕ್ಷ ರೂಪಾಯಿ ಆದಾಯ ಗಳಿಕೆ

Last Updated : Oct 26, 2023, 8:00 PM IST

ABOUT THE AUTHOR

...view details