ಬಾಗಲಕೋಟೆ:ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಬೆಂಬಲಿಗರು ಸೇರಿ ಒಟ್ಟು 27 ಜನರ ವಿರುದ್ಧ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಳಕಲ್ ತಹಶೀಲ್ದಾರರಿಗೆ ಜೀವ ಬೆದರಿಕೆ ಜೊತೆಗೆ ಅವಾಚ್ಯವಾಗಿ ಬೈದ ಆರೋಪದಡಿ ದೂರು ದಾಖಲಾಗಿದೆ. ವಿಜಯಾನಂದ ಕಾಶಪ್ಪನವರ 2ನೇ ಆರೋಪಿಯಾಗಿದ್ದು, ಕಾಶಪ್ಪನವರ ಸಂಬಂಧಿಕ ಮುತ್ತಣ್ಣ ಕಲ್ಗುಡಿ ಮೊದಲ ಆರೋಪಿಯಾಗಿದ್ದಾರೆ.
ಮಹಾಂತೇಶ್ ಅಂಗಡಿ, ಸುರೇಶ್ ಜಂಗ್ಲಿ, ಮೌಲಾ ಬಂಡಿವಡ್ಡರ, ಶರಣಪ್ಪ ಅಮದಿಹಾಳ, ಅಬ್ದುಲ್ ರಜಾಕ್ ತಟಗೇರ, ಅಬ್ದುಲ್ ಹಳ್ಳಿ ಸೇರಿ ಒಟ್ಟು 27 ಜನರ ವಿರುದ್ಧ 143, 147, 283, 504, 506, 149 ಕಲಂ ಅಡಿ ಪೊಲೀಸರು ದೂರು ದಾಖಲಿಸಿದ್ದಾರೆ.
ನವಂಬರ್ 27 ರಂದು ಇಳಕಲ್ ನಗರದಲ್ಲಿ ವಿಜಯಾನಂದ ಕಾಶಪ್ಪನವರ ಸೇರಿ ಹಲವು ಮುಖಂಡರು ಸರ್ವಧರ್ಮ ಭಾವೈಕ್ಯತಾ ಸಮಾವೇಶವನ್ನು ಕಂಠಿ ಸರ್ಕಲ್ನಲ್ಲಿ ಏರ್ಪಡಿಸಿದ್ದರು. ಸಮಾವೇಶ ಹಿನ್ನೆಲೆ 42 ಜನ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದಾರ್ಶನಿಕರ ಭಾವಚಿತ್ರ ಮೆರವಣಿಗೆ ಹಮ್ಮಿಕೊಂಡಿದ್ದರು.
ಇದಕ್ಕಾಗಿ ತಹಶೀಲ್ದಾರ್ರಿಂದ ಪರವಾನಗಿ ಪಡೆದುಕೊಂಡಿದ್ದರು. ಆದರೆ, ಕಾರ್ಯಕ್ರಮದ ಬಗ್ಗೆ ಸಂಘಟಕರು ಸಾಮಾಜಿಕ ಜಾಲತಾಣದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಹರಿಬಿಟ್ಟಿದ್ದರಂತೆ. ಟಿಪ್ಪು ಭಾವಚಿತ್ರ ಮೆರವಣಿಗೆಯಲ್ಲಿ ಕಾಣಿಸಿಕೊಂಡರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಹುದು ಎಂದು ಇಳಕಲ್ ತಹಶೀಲ್ದಾರ್ ನೀಡಿದ್ದ ಅನುಮತಿ ರದ್ದು ಪಡಿಸಿದ್ದರು.
ಇದರಿಂದ ರೊಚ್ಚಿಗೆದ್ದ ಸಂಘಟಿಕರು, ಇಳಕಲ್ ನಗರದ ಕಂಠಿ ಸರ್ಕಲ್ನಲ್ಲಿ ಗುಂಪುಗೂಡಿದ್ದರು. ಈ ವೇಳೆ, ಮಾಜಿ ಶಾಸಕ ಕಾಶಪ್ಪನವರ ಅವರು ತಹಶೀಲ್ದಾರ್ಗೆ ಅಶ್ಲೀಲವಾಗಿ ಬೈದು, ಚುನಾವಣೆಗೆ ಇನ್ನು 123 ದಿನ ಮಾತ್ರ ಇದೆ. ನಮ್ಮದೇ ಸರ್ಕಾರ ಬರುತ್ತೆ. ಆಗ ಈ ಅಧಿಕಾರಿಗಳು ಎಲ್ಲೆ ಇದ್ರು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಜೊತೆಗೆ ರಸ್ತೆಯಲ್ಲಿ ಸಂಚರಿಸುವ ವಾಹನ ಹಾಗೂ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ ಎಂದು ಆರೋಪಿಗಳ ವಿರುದ್ದ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ನೌಕರ ಮಹೇಶ ಎನ್ನುವವರು ಡಿ. 1 ರಂದು ದೂರು ದಾಖಲಿಸಿದ್ದಾರೆ.
(ಓದಿ: ಹುನಗುಂದಕ್ಕೆ ಬಂದು ವಿಜಯೇಂದ್ರ ಗೆದ್ದು ತೋರಿಸಲಿ: ಕಾಶಪ್ಪನವರ ಓಪನ್ ಚಾಲೆಂಜ್)