ಬಾಗಲಕೋಟೆ: ಕಬ್ಬು ಬೆಳೆಗೆ ಪ್ರತಿ ಟನ್ಗೆ 2,900 ರೂಪಾಯಿ ದರ ನಿಗದಿಪಡಿಸುವಂತೆ ಒತ್ತಾಯಿಸಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕಳೆದ ಎರಡು ದಿನಗಳಿಂದ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ನಗರದ ಗದ್ದನಕೇರಿ ಕ್ರಾಸ್ನಲ್ಲಿ ಎರಡು ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಎರಡನೇ ದಿನದ ರೈತರ ಹೋರಾಟವು ಮುಧೋಳ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೂ ವ್ಯಾಪಿಸಿತ್ತು. ಹುಬ್ಬಳ್ಳಿ- ಸೋಲಾಪುರ ಹಾಗೂ ರಾಯಚೂರು- ಬೆಳಗಾವಿ ಎರಡೂ ಹೆದ್ದಾರಿ ರಸ್ತೆ ಬಂದ್ ಮಾಡಿ, ರಸ್ತೆಯ ಮಧ್ಯದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ ಟ್ರ್ಯಾಕ್ಟರ್ ಗಳನ್ನು ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆ ಮಾಡಲಾಯಿತು. ಇಲ್ಲಿನ ಗದ್ದನಕೇರಿ ಕ್ರಾಸ್, ಲೋಕಾಪೂರ, ಮುಧೋಳ, ರಬಕವಿ ಬನಹಟ್ಟಿ ಸೇರಿದಂತೆ ವಿವಿಧೆಡೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ರೈತರ ಪ್ರತಿಭಟನೆ: ಕಳೆದ ಒಂದು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಬ್ಬು ಬೆಳೆಗಾರರು, ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂವರು ಸಚಿವರ ಸಮ್ಮುಖದಲ್ಲಿ ನಡೆದ ಸಭೆ ವಿಫಲವಾಗಿತ್ತು. ಇದರಿಂದ ರೈತರು ಮುಧೋಳ ಪಟ್ಟಣ ಬಂದ್ ಮಾಡಿ, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಿಗೆ ಪ್ರತಿ ಟನ್ಗೆ 2900 ರೂ. ನೀಡುವಂತೆ ರೈತರ ಒತ್ತಾಯ : ಸರ್ಕಾರವು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಪ್ರತಿ ಟನ್ ಗೆ 2900 ರೂಪಾಯಿಯಂತೆ ದರ ನಿಗದಿಗೊಳಿಸಲು ಸೂಚಿಸಬೇಕು ಎಂದು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಧಮ್ ತಾಕತ್ತು ಎಂದು ಮಾತನಾಡುತ್ತಾರೆ. ಆದರೆ, ನಾವು ಆ ರೀತಿ ಮಾತನಾಡುವುದಿಲ್ಲ. ಸರ್ಕಾರ ರೈತರಿಗೆ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಟನ್ ಗೆ 2900 ದರ ಕೊಡಿಸುವಂತೆ ಮಾಡಿ ಎಂದು ಹೇಳಿದರು.