ಬಾಗಲಕೋಟೆ: ಮುಧೋಳ ತಾಲೂಕಿನ ತಿಮ್ಮಾಪೂರ ಗ್ರಾಮದ ಬಳಿಯಿರುವ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಷ್ಟದ ನೆಪ ಹೇಳಿ ಖಾಸಗಿಯವರಿಗೆ ಲೀಸ್ಗೆ ನೀಡಲು ಮುಂದಾಗಿರುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ಸ್ಥಳೀಯ ರೈತ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ರನ್ನ ಸಕ್ಕರೆ ಕಾರ್ಖಾನೆ ಲೀಸ್ಗೆ ನೀಡಲು ನಿರ್ಧಾರ: ರೈತ ಮುಖಂಡರಿಂದ ತೀವ್ರ ವಿರೋಧ - ರನ್ನ ಸಕ್ಕರೆ ಕಾರ್ಖಾನೆ ಲೀಸ್ಗೆ ನೀಡಲು ರೈತ ವಿರೋಧ
ನಷ್ಟದ ನೆಪ ಹೇಳಿ ಮಧೋಳ ತಾಲೂಕು ತಿಮ್ಮಾಪೂರದ ರನ್ನ ಸಕ್ಕರೆ ಕಾರ್ಖಾನೆಯನ್ನು ಲೀಸ್ಗೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದ್ದು, ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 17 ರಂದು ವರ್ಚುವಲ್ ಸಭೆ ನಡೆಸಿ ರೈತರ ಅಭಿಪ್ರಾಯ ಸಂಗ್ರಹಿಸಿಲು ಆಡಳಿತ ಮಂಡಳಿ ಮುಂದಾಗಿದೆ. ಇದಕ್ಕೆ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರನ್ನ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ರಾಮಣ್ಣ ತಳೇವಾಡ ಎಂಬವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 200 ಕೋಟಿ ರೂ. ವ್ಯವಹಾರ ನಡೆಯುವ ಈ ಕಾರ್ಖಾನೆಯು ನಷ್ಟದಲ್ಲಿದೆ ಎಂಬ ನೆಪ ಹೇಳಿ ಆಡಳಿತ ಮಂಡಳಿ ಲೀಸ್ಗೆ ನೀಡಲು ಮುಂದಾಗಿದ್ದು, ಆನ್ ಲೈನ್ ಮೂಲಕ ರೈತರ ಅಭಿಪ್ರಾಯ ಸಂಗ್ರಹ ಮಾಡಲು ನಿರ್ಧರಿಸಿದ್ದಾರೆ. ಕಾರ್ಖಾನೆಯ 2 ಸಾವಿರಕ್ಕೂ ಅಧಿಕ ಸದಸ್ಯರು ರೈತರಾಗಿದ್ದು, ಹೆಚ್ಚಿನವರಲ್ಲಿ ಸ್ಮಾರ್ಟ್ ಪೋನ್ ಇಲ್ಲ. ಹೀಗಾಗಿ, ನಾವು ಹೇಗೆ ಅಭಿಪ್ರಾಯ ತಿಳಿಸಲು ಸಾಧ್ಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಯನ್ನು ಲೀಸ್ಗೆ ನೀಡುವ ಬದಲು ಆಡಳಿತ ಮಂಡಳಿಯ ಸದಸ್ಯರು ರಾಜೀನಾಮೆ ನೀಡಲಿ. ಆಗ ರೈತರೇ ಸೇರಿಕೊಂಡು ಚುನಾವಣೆ ನಡೆಸಿ, ಯೋಗ್ಯ ಅಧ್ಯಕ್ಷರನ್ನು ಆಯ್ಕೆ ಮಾಡಿ ಮುನ್ನಡೆಸಿಕೊಂಡು ಹೋಗುತ್ತಾರೆ. ಕೊರೊನಾ ನೆಪದಲ್ಲಿ ಆನ್ ಲೈನ್ ಮೂಲಕ ಚರ್ಚೆ ಮಾಡುವುದನ್ನು ಕೈ ಬಿಡಬೇಕು. ಕೊರೊನಾ ನಂತರ ಎಲ್ಲಾ ಸದಸ್ಯರ ಸಭೆ ಕರೆದು ನಷ್ಟ ಹೇಗೆ ಉಂಟಾಯಿತು ಎಂಬ ಮಾಹಿತಿ ಸೇರಿದಂತೆ ಇತರ ಭ್ರಷ್ಟಾಚಾರ ನಡೆದಿರುವ ಬಗ್ಗೆ ಚರ್ಚೆ ನಡೆಯಬೇಕು. ಇಲ್ಲವೇ ಕೊರೊನಾ ಇದ್ದರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಸಭೆ ನಡೆಸಬೇಕು. ಸ್ಥಳೀಯ ಶಾಸಕರು ಹಾಗೂ ಉಪಮುಖ್ಯಮಂತ್ರಿಯಾಗಿರುವ ಗೋವಿಂದ ಕಾರಜೋಳ ಕಾರ್ಖಾನೆ ಕಟ್ಟಲು ಹಿಂದೆ ಸಾಕಷ್ಟು ಶ್ರಮಿಸಿದ್ದಾರೆ. ಈಗ ಅವರೇ ಮುಂದೆ ನಿಂತು ಖಾಸಗಿಯವರಿಗೆ ಲೀಸ್ಗೆ ಕೂಡುವ ಉದ್ದೇಶ ಏನು ಎಂಬುವುದು ಬಹಿರಂಗಪಡಿಸಬೇಕು. ರೈತರನ್ನು ಸೇರಿಸಿ ಸಭೆ ನಡೆಸಬೇಕು. ಇಲ್ಲವಾದಲ್ಲಿ ಮುಂದೆ ನಡೆಯುವ ಘಟನೆಗೆ ಸರ್ಕಾರ ಜವಾಬ್ದಾರಿಯಾಗಿರುತ್ತದೆ ಎಂದು ಆಡಳಿತ ಮಂಡಳಿ ಮಾಜಿ ನಿರ್ದೇಶಕ ದಯಾನಂದ, ರೈತ ಮುಖಂಡ ವಿಶ್ವನಾಥ ಉದಗಟ್ಟಿ, ಡಿಸಿಸಿ ಬ್ಯಾಂಕ್ನ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಉದಯ ಸಾರವಾಡ ಸೇರಿದಂತೆ ಇತರ ಮುಖಂಡರು ಎಚ್ಚರಿಕೆ ನೀಡಿದ್ದಾರೆ.