ಕರ್ನಾಟಕ

karnataka

ETV Bharat / state

ಬ್ಯಾರಲ್​ ಬಳಸಿ ಸೇತುವೆ ನಿರ್ಮಾಣ ಮಾಡಿದ ರೈತರು.. ದಶಕದ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡ ಬಾಗಲಕೋಟೆಯ ಅನ್ನದಾತರು - ಬ್ಯಾರಲ್​ ಬಳಸಿ ಸೇತುವೆ​ ನಿರ್ಮಾಣ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ರೈತರೆಲ್ಲ ಸೇರಿಕೊಂಡು ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್​ ಬಳಸಿ ಸೇತುವೆ​ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಮ್ಮ ಸಂಚಾರದ ಸಮಸ್ಯೆಗೆ ಸ್ವತಃ ಪರಿಹಾರ ಕಂಡುಕೊಂಡಿದ್ದಾರೆ.

farmers built  bridge using  barrels in bagalkot
ದಶಕದ ಸಮಸ್ಯೆಗೆ ಪರಿಹಾರ : ಬ್ಯಾರಲ್​ ಬಳಸಿ ಸೇತುವೆ ನಿರ್ಮಾಣ ಮಾಡಿದ ರೈತರು

By ETV Bharat Karnataka Team

Published : Sep 28, 2023, 6:46 PM IST

Updated : Sep 29, 2023, 9:39 PM IST

ದಶಕದ ಸಮಸ್ಯೆಗೆ ಪರಿಹಾರ : ಬ್ಯಾರಲ್​ ಬಳಸಿ ಸೇತುವೆ ನಿರ್ಮಾಣ ಮಾಡಿದ ರೈತರು

ಬಾಗಲಕೋಟೆ: ರೈತರು ಮನಸ್ಸು ಮಾಡಿದರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಬಾಗಲಕೋಟೆಯ ಜಮಖಂಡಿ ರೈತರು ತೋರಿಸಿಕೊಟ್ಟಿದ್ದಾರೆ. ಇಲ್ಲಿನ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್​ ಸೇತುವೆ ನಿರ್ಮಾಣ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ದಶಕಗಳಿಂದ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮಸ್ಥರು ಎದುರಿಸುತ್ತಿದ್ದ ಸಮಸ್ಯೆಗೆ ರೈತರು ಪರಿಹಾರ ಕಂಡುಕೊಂಡಿದ್ದಾರೆ.

ರೈತರಿಂದ ಬ್ಯಾರಲ್​ ಸೇತುವೆ ನಿರ್ಮಾಣ :ಗ್ರಾಮದ ರೈತರು ಸ್ವತಃ ತಾವೇ ಹಣ ಸಂಗ್ರಹಿಸಿ ನದಿ ದಾಟಲು ಬ್ಯಾರಲ್ ಸೇತುವೆ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಕೃಷ್ಣಾ ನದಿಗೆ ಅಡ್ಡಲಾಗಿ 600 ಅಡಿ ಉದ್ದ ಹಾಗೂ 8 ಅಡಿ ಅಗಲವಾದ ಬ್ಯಾರಲ್ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಜಮೀನಿಗೆ ಹಾಗೂ‌ ಮನೆಗಳಿಗೆ ತೆರಳುವ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಅಂದಾಜು ಇನ್ನೂರು ರೈತ ಕುಟುಂಬಗಳು ವಂತಿಗೆ ಸಂಗ್ರಹಿಸಿ 7.25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿದ್ದಾರೆ.

7 ಲಕ್ಷ ವೆಚ್ಚದಲ್ಲಿ ಸೇತುವೆ :ಕೃಷ್ಣಾ ನದಿಯಲ್ಲಿ ನೀರು ಪ್ರಮಾಣ ಹೆಚ್ಚಾದರೆ ಇಲ್ಲಿನ ಕಬ್ಬು ಬೆಳೆಗಾರರು ತಮ್ಮಬೆಳೆಯನ್ನು ಜಮೀನಿನಿಂದ ಮಾರುಕಟ್ಟೆಗೆ ಸಾಗಿಸಲು ಗ್ರಾಮವನ್ನು ಸುತ್ತುವರೆದು ಹೋಗಬೇಕು. ಇಲ್ಲದಿದ್ದರೆ ಕಬ್ಬು ಬೆಳೆಯನ್ನು ಟ್ರ್ಯಾಕ್ಟರ್ ಸಮೇತ ಬೋಟ್​ನಲ್ಲಿ ಸಾಗಿಸಬೇಕು. ಬೋಟ್​ನಲ್ಲಿ ಒಂದು ಲೋಡ್ ಕಬ್ಬು ಸಾಗಿಸಬೇಕಾದರೆ ರೈತರು 800ರಿಂದ 1000 ರೂಪಾಯಿ ಪಾವತಿಸಬೇಕಾಗುತ್ತದೆ. ಬೋಟ್​ನಲ್ಲಿ ಸಾಗಿಸುವುದರಿಂದ ಅಪಾಯ ಜಾಸ್ತಿ ಇರುತ್ತದೆ ಎಂದು ರೈತರು ಹೇಳುತ್ತಾರೆ.

ಇದಕ್ಕೆಲ್ಲ ಪರಿಹಾರವನ್ನು ಕಂಡು‌ಕೊಳ್ಳಲು ಊರಿನ ರೈತರೇ ಸೇರಿಕೊಂಡು ಬ್ಯಾರಲ್​ ಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದರು. ಈ ಸಂಬಂಧ ಗ್ರಾಮದಲ್ಲಿನ ರೈತರೆಲ್ಲ ಸೇರಿಕೊಂಡು ವಂತಿಕೆ ಸಂಗ್ರಹ ಮಾಡಿದರು. ಬಳಿಕ ಇನ್ನೂರಕ್ಕೂ‌ ಹೆಚ್ಚು ರೈತರು ಸೇರಿಕೊಂಡು ವಂತಿಗೆಯ ಹಣದಿಂದ ಬ್ಯಾರಲ್​ ಸೇತುವೆ ನಿರ್ಮಾಣ ಮಾಡಿದರು. ಈ ಬ್ಯಾರಲ್​ ಸೇತುವೆಯನ್ನು ವಿಶಿಷ್ಟವಾಗಿ ಮಾಡಲಾಗಿದೆ. ನೂರಾರು ಬ್ಯಾರೆಲ್​ಗಳನ್ನು ಕ್ರಮವಾಗಿ ಜೋಡಿಸಿ ಈ ಸೇತುವೆಯನ್ನು ಕಟ್ಟಲಾಗಿದೆ.

ಈ ಸೇತುವೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಬ್ಯಾರೆಲ್​ ನೀರಿನಲ್ಲಿ ತೇಲುವುದರಿಂದ ಜನರು ಇದರಲ್ಲಿ ಸಾಗಬಹುದು. ಈ ಸೇತುವೆಯು ಜನರ ಸಂಚಾರಕ್ಕೆ ಮಾತ್ರವಲ್ಲದೆ ಜಮೀನುಗಳಿಂದ ಕಬ್ಬು ಬೆಳೆ ಸೇರಿದಂತೆ ವಿವಿಧ ವಸ್ತುಗಳ ಸಾಗಾಣಿಕೆಗೂ ಉಪಯೋಗವಾಗಲಿದೆ. ಜಿಲ್ಲೆಯ ರೈತರ ಕಾರ್ಯ ಇತರರಿಗೆ ಮಾದರಿಯಾಗಿದೆ.

ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಕಂಕಣವಾಡಿ ಗ್ರಾಮ ಪಂಚಾಯತಿ ಸದಸ್ಯ ರಾಜು ನದಾಫ್, ''ಬ್ಯಾರಲ್​ನಿಂದ ಬ್ಯಾರೇಜ್ ನಿರ್ಮಾಣ ಮಾಡಿರುವುದು ಸಾಕಷ್ಟು ಅನುಕೂಲವಾಗಿದೆ. ಕೃಷ್ಣ ನದಿಯಲ್ಲಿ ಮುಳಗಡೆ ಆಗಿ ನಡುಗಡ್ಡೆ ಆಗಿರುವ ಹಿನ್ನೆಲೆಯಲ್ಲಿ ರೈತರೇ ಸೇರಿಕೊಂಡು ಹಣ ಸಂಗ್ರಹಿಸಿ, ಒಂದು ತಿಂಗಳಿನಲ್ಲಿ 700 ಮೀಟರ್ ಉದ್ದದಷ್ಟು ಸೇತುವೆ ನಿರ್ಮಿಸಿದ್ದಾರೆ. ಇದರಿಂದ ಬೈಕ್, ಸೈಕಲ್ ಹಾಗೂ ಎತ್ತುಗಳು ಸಂಚರಿಸಲು ಅನುಕೂಲವಾಗಲಿದೆ. ಸರ್ಕಾರದ ಯಾವುದೇ ಸಹಾಯ ಇಲ್ಲದೆ ರೈತರೇ ಸೇರಿಕೊಂಡು ಸೇತುವೆ ಮಾಡಲಾಗಿದೆ. ನಡುಗಡ್ಡೆ ಪ್ರದೇಶದಲ್ಲಿ 500 ಎಕರೆ ಪ್ರದೇಶ ಜಮೀನು ಇದೆ. ಇಲ್ಲಿಗೆ ಹೋಗಬೇಕಾದರೆ ಬೋಟ್ ಮೂಲಕ ಸಂಚರಿಸಬೇಕು. ರಾತ್ರಿ ಹೊತ್ತಿನಲ್ಲಿ ನಡುಗಡ್ಡೆಗೆ ತೆರಳಲು ಸಾಧ್ಯವೇ ಇರಲಿಲ್ಲ. ಈಗ ಸಾಕಷ್ಟು ಅನುಕೂಲವಾಗಿದೆ'' ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ಶಿವಮೊಗ್ಗ ಹಿಂದೂ ಮಹಾ ಮಂಡಳಿ ಗಣಪತಿ ನಿಮಜ್ಜನ ಮೆರವಣಿಗೆ ಪ್ರಾರಂಭ: ಸಾವಿರಾರು ಮಂದಿ ಭಾಗಿ

Last Updated : Sep 29, 2023, 9:39 PM IST

ABOUT THE AUTHOR

...view details