ಬಾಗಲಕೋಟೆ :ರಾಜ್ಯವಷ್ಟೇ ಅಲ್ಲದೇ ಈ ಬಾರಿ ದೇಶಾದ್ಯಂತ ಬಾಳೆ ಬೆಳೆಯ ಇಳುವರಿ ಕ್ಷೀಣಿಸಿದ್ದರ ಹಿನ್ನೆಲೆಯಲ್ಲಿ ಜವಾರಿಯಷ್ಟೇ ಮಹತ್ವವಾಗಿ ಹೈಬ್ರೀಡ್ ತಳಿಯ ಬಾಳೆಗೂ ಭಾರಿ ಬೇಡಿಕೆ ಬಂದಿದೆ. ಬಾಳೆಯ ಬೆಲೆ ಐತಿಹಾಸಿಕ ದಾಖಲೆ ಬರೆದಿದೆ ಎನ್ನಬಹುದು. ಕಳೆದ ವರ್ಷ ಕೋವಿಡ್ ಕಾರಣದಿಂದ 2 ರಿಂದ 3ರೂ ಇದ್ದ ಬಾಳೆ ಬೆಲೆ ಈ ಬಾರಿ ಕೆಜಿಗೆ 22 ರಿಂದ 23 ರೂ ಆಗಿದೆ.
ಬಂಗಾರವಾದ ಬಾಳೆ ಬೆಳೆ ರೈತರ ಮೊಗದಲ್ಲಿ ಸಂತಸ ಈ ಬೆಲೆ ಸಾಮಾನ್ಯವಾಗಿ ಜವಾರಿ, ರಸಬಾಳೆ, ಏಲಕ್ಕಿ ಬಾಳೆ ಮಾತ್ರ ಇರುತ್ತಿತ್ತು. ಆದರೆ, ಈ ಬಾರಿ ಹೈಬ್ರೀಡ್ ತಳಿಯ ಜಿ-9 ಬಾಳೆಯೂ ಸಮನಾದ ಬೆಲೆ ದೊರೆಯುತ್ತಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಜನರು ಹೆಚ್ಚು ಕಡಿಮೆ ಸೇಬು, ಮಾವಿನ ಹಣ್ಣಿಗೆ ನೀಡುವಷ್ಟು ಹಣ ಕೊಟ್ಟು ಬಾಳೆ ಹಣ್ಣು ಖರೀದಿಸುವುದು ಅನಿವಾರ್ಯವಾಗಿದೆ.
ರಾಜ್ಯದಲ್ಲಿ ಬಾಳೆ ಬೆಳೆ ಕುಂಠಿತವಾಗಿರುವುದರಿಂದ ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಬೇಡಿಕೆ ತಕ್ಕಷ್ಟು ಪೂರೈಕೆ ಆಗದಿರುವ ಕಾರಣ ಬೆಲೆ ಏರಿಕೆ ಆಗಿದೆ. ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಜಿ - 9 ಬಾಳೆಯು ಕ್ವಿಂಟಲ್‌ಗೆ 2,200 ರಿಂದ2,500 ರೂ.ವರೆಗೆ ಮಾರಾಟವಾಗುತ್ತಿದೆ.
ರಬಕವಿ - ಬನಹಟ್ಟಿ ತಾಲೂಕಿನಲ್ಲಿ ಪ್ರತಿ ವರ್ಷ ಸಾವಿರ ಎಕರೆಯಷ್ಟು ಬಾಳೆ ಬೆಳೆಯುತ್ತಿದ್ದರು. ಕಳೆದೆರಡು ವರ್ಷಗಳಿಂದ ಸತತ ನಷ್ಟ ಆದ ಕಾರಣ ರೈತರು ಈ ಬಾರಿ ಬೇರೆ ಬೆಳೆಗಳತ್ತ ಮುಖ ಮಾಡಿದ್ದಾರೆ. ಇದರಿಂದ ರಬಕವಿ - ಬನಹಟ್ಟಿಯಲ್ಲಿ ಸುಮಾರು 200 ಎಕರೆ ಅಷ್ಟೇ ಈ ಬಾರಿ ಬಾಳೆ ಬೆಳೆ ಹಾಕಲಾಗಿದೆ. ಮುಂದಿನ ಹಬ್ಬಗಳ ಸಮಯಕ್ಕೆ ಬೆಳೆ ಕೈಗೆ ಬರಲಿದ್ದು, ರೈತರು ಇನ್ನಷ್ಟು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. ರೈತನಿಗೆ ಬಾಳೆ ಬಂಗಾರವಾದಂತೆ, ಗ್ರಾಹಕನಿಗೂ ಬಂಗಾರದ ಬೆಲೆ ಕೊಟ್ಟು ಖರೀದಿಸುವ ಸ್ಥಿತಿ ಬರುವ ಸಾಧ್ಯತೆ ಇದೆ.
ಜಿ-9 ತಳಿಯ ಬಾಳೆ ಈ ಬಾರಿ ಕೈ ಹಿಡಿದಿದೆ. ಹಿಂದೆಂದೂ ದೊರಕದಷ್ಟು ದಾಖಲೆಯ ಬೆಲೆ ಬಂದಿರುವುದು ಸಂತಸ ತಂದಿದೆ ಎಂದು ಯುವ ರೈತ ಗುರು ಉಳ್ಳಾಗಡ್ಡಿ ಸಂತಸ ವ್ಯಕ್ತಪಡಿಸಿದರು.
ಬಾಳೆ ಹಣ್ಣಿನ ಬೆಲೆ ಒಂದೆರಡು ತಿಂಗಳಲ್ಲಿ ದುಪ್ಪಟ್ಟಾಗಿದೆ. ಬೇಡಿಕೆಗೆ ತಕ್ಕಂತೆ ಬಾಳೆಹಣ್ಣು ಸಿಗುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ಉತ್ತರಿಸುವುದು ಕಷ್ಟವಾಗಿದೆ ಎಂದು ಬಾಳೆಹಣ್ಣು ವ್ಯಾಪಾರಿ ಬಸವರಾಜ ಬೆಳಗಲಿ ತಿಳಿಸಿದರು.
ಇದನ್ನೂ ಓದಿ :ನಾಳೆಯಿಂದ 2 ದಿನ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನ