ಬಾಗಲಕೋಟೆ :ಇವರ ಬಳಿ ದಾಖಲೆಗಳು ಸರಿಯಾಗಿದ್ದರೆ ಇಂದು ಕೋಟ್ಯಾಧೀಶರಾಗಿ ಮೆರೆಯುತ್ತಿದ್ದರು. ಆದರೆ, ಸೂಕ್ತ ದಾಖಲೆಗಳಿಲ್ಲದೆ, ಕೆಲವರು ವಂಚನೆ ಮಾಡಿರುವುದರಿಂದ ಇಂದು ಬೀದಿ ಪಾಲಾಗಿದ್ದಾರೆ. ವಾಸ್ತವ್ಯಕ್ಕೆ ಸ್ವಂತ ಮನೆಯಿಲ್ಲದೆ, ರಸ್ತೆ ಇಲ್ಲವೇ ಖಾಲಿ ಇರುವ ಅಂಗಡಿ ಸ್ಥಳದಲ್ಲಿ ವಾಸಿಸುವ ಪರಿಸ್ಥಿತಿ ಬಂದಿದೆ.
ಮನೆ ಉಳಿಸಿಕೊಡುವಂತೆ ಕುಟುಂಬಸ್ಥರ ಅಳಲು ಬಾಗಲಕೋಟೆಯ ನವನಗರದ 30ನೇ ಸೆಕ್ಟರ್ನ ಮಾರುಕಟ್ಟೆ ಪ್ರದೇಶದಲ್ಲಿ ಖಾಲಿಯಿರುವ ಅಂಗಡಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ಕುಟುಂಬವೊಂದು ಜೀವನ ನಡೆಸುತ್ತಿದೆ. ಅಣ್ಣ, ತಂಗಿ ಹಾಗೂ ತಾಯಿ ಇಲ್ಲಿಯೇ ಊಟ ವಸತಿ, ದಿನದ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಆಲಮಟ್ಟಿ ಹಿನ್ನೀರಿನಲ್ಲಿ ಗಂಡೆರಾವ್ ಕೌಕರ ಎಂಬುವರ ಜಮೀನು ಮುಳುಗಡೆಯಾಗಿತ್ತು. ಈ ಹಿನ್ನೆಲೆ ಸರ್ಕಾರದಿಂದ ನವನಗರ ಸೆಕ್ಟರ್ ನಂಬರ್ 32ರಲ್ಲಿ ಇ ಮಾದರಿಯ ಅಂದ್ರೆ 5,400 ಸ್ಕ್ವೈಯರ್ ಫೀಟ್ ನಿವೇಶನ ನೀಡಿತ್ತು.
ಆದರೆ, ಗಂಡೆರಾವ್ ಕೌಕರ್ ಈ ನಿವೇಶನದ ಮೂಲಕ ಬ್ಯಾಂಕ್ ಸಾಲ ತೆಗೆದುಕೊಂಡು ಸಾಲ ತೀರಿಸಲಾಗದೆ, ಹರಾಜಿನಲ್ಲಿ ಬೇರೆಯವರು ನಿವೇಶನ ತೆಗೆದುಕೊಳ್ಳಲಾಗಿದೆ. ಆದರೆ, ಕುಟುಂಬಸ್ಥರ ಪ್ರಕಾರ ಕಟ್ಟಿದ ಮನೆಯನ್ನು ಅತಿ ಕಡಿಮೆ ದರದಲ್ಲಿ, ಮೋಸ ಮಾಡಿ ಖರೀದಿಸಿದ್ದಾರೆ. ಈ ಬಗ್ಗೆ ಬ್ಯಾಂಕಿನವರಿಗೆ, ಮನೆಯ ಖರೀದಿದಾರರಿಗೆ, ಸ್ಥಳೀಯ ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಗಂಡೆರಾವ್ ಅವರ ಮಗಳು ಸುಮಾ ಕೌಕರ್ ಹಾಗೂ ಅಣ್ಣ ಸಂತೋಷ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ಚಿಂತೆಯಲ್ಲಿ ತಾಯಿಯು ಸಹ ಅನಾರೋಗ್ಯಕ್ಕಿಡಾಗಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.
ಇದನ್ನೂ ಓದಿ:ಶೋಕಿಗಾಗಿ ಸರಗಳ್ಳತನ : ಚಿತ್ರದುರ್ಗದಲ್ಲಿ ಇಬ್ಬರ ಬಂಧನ
ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋದರೂ, ಮನೆ ಖರೀದಿಸಿದವರು ಸಹ ವಕೀಲರಾಗಿದ್ದಾರೆ. ಇದರಿಂದ ನಮಗೆ ನ್ಯಾಯ ಸಿಗ್ತಿಲ್ಲ ಎಂದು ಸುಮಾ ಆರೋಪಿಸಿದ್ದಾರೆ. ಆ ಮನೆಯ ಬೆಲೆಯೀಗ ಅಂದಾಜು 2 ಕೋಟಿ ರೂಪಾಯಿಗಳಿಷ್ಟಿದೆ. ವಾರಸುದಾರರ ಸಹಿ ಇಲ್ಲದೆ ನೋಂದಣಿ ಇಲಾಖೆಯಲ್ಲಿ ಬೇರೆಯವರ ಹೆಸರಿಗೆ ಆಗುವುದಿಲ್ಲ. ಆದರೆ, ಇಷ್ಟೆಲ್ಲಾ ಹೇಗೆ ಆಗಿದೆ ಎಂಬುದು ತಿಳಿಯದೇ ಕುಟುಂಬಸ್ಥರು ಚಿಂತೆಯಲ್ಲಿ ಮುಳುಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಲೋಕಾಯುಕ್ತರಿಂದ ತನಿಖೆ ನಡೆಸಿ ಸೂಕ್ತ ನ್ಯಾಯ ಒದಗಿಸಿಕೊಡಿಸುವಂತೆ ನೊಂದ ಕುಟುಂಬ ಆಗ್ರಹಿಸುತ್ತಿದೆ.